

ಹಾಸನ: ಜಿಲ್ಲೆಯ ಕೆಲ ಕಾಂಗ್ರೆಸ್ ಮುಖಂಡರು ಮಂಡ್ಯ ಜಿಲ್ಲೆ ಕೆರಗೋಡು ಘಟನೆ ಮುಂದಿಟ್ಟು ನಮ್ಮ ನಾಯಕರಾದ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಿರುವುದು ನಗೆಪಾಟಲಿನ ನಡೆ ಎಂದು ಜಿಲ್ಲಾ ಜೆಡಿಎಸ್ ವಕ್ತಾರ ಹೊಂಗೆರೆ ರಘು ಲೇವಡಿ ಮಾಡಿದ್ದಾರೆ.
ಪ್ರತ್ರಿಕೆ ಪ್ರಕಟಣೆ ನೀಡಿರುವ ಅವರು,ಹಾಸನದಲ್ಲಿ ಕುಳಿತು ಕೆರೆಗೋಡು ಘಟನೆ ಬಗ್ಗೆ ಹೇಳಿಕೆ ಕೊಟ್ಟಿರುವ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಜಿಲ್ಲೆಯ ಹಲವು ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತರುವ ಕೆಲಸ ಮಾಡಲಿ ಎಂದು ಕುಟುಕಿದ್ದಾರೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿಲ್ಲೆಯಲ್ಲಿ ನಯಾಪೈಸೆ ಅಭಿವೃದ್ಧಿ ಕೆಲಸ ನಡೆದಿಲ್ಲ. ನಗರದ ಜನರ ಬಹುವರ್ಷಗಳ ಬೇಡಿಕೆಯಾಗಿದ್ದ ಫ್ಲೈ ಓವರ್ ಒಂದು ಓಡಾಟಕ್ಕೆ ಮುಕ್ತವಾಗಿದ್ದರೂ, 2017 ರ ಒಪ್ಪಂದಂತೆ ತನ್ನ ಪಾಲಿನ ಹಣ ನೀಡದೆ ಬಂದ್ ಆಗಲು ರಾಜ್ಯ ಸರ್ಕಾರವೇ ಕಾರಣ ಎಂಬುದನ್ನೂ ಮನವರಿಕೆ ಮಾಡಿ ಎಂದು ಒತ್ತಾಯಿದ್ದಾರೆ.
ಜಿಲ್ಲೆಯ ಅಭಿವೃದ್ಧಿ ಗೆ ಎಷ್ಟು ಅನುದಾನ ಬಿಡುಗಡೆ ಆಗಿದೆ ಎಂಬುದನ್ನು ಅವರದೇ ಉಸ್ತುವಾರಿ ಸಚಿವರ ಮೂಲಕ ಹೇಳಿಸಲಿ ಎಂದು ಒತ್ತಾಯಿಸಿರುವ ರಘು, ಜಿಲ್ಲೆಯಲ್ಲೇ ತಮ್ಮ ಸರ್ಕಾರದ ಹಲವು ಸಮಸ್ಯೆ, ಲೋಪ ಇರುವಾಗ ತಾವು ಮಂಡ್ಯ ಘಟನೆ ಬಗ್ಗೆ ಹೇಳಿಕೆ ನೀಡಿರುವುದು ನಿಜಕ್ಕೂ ನಗೆ ತರಿಸುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.
ಜಿಲ್ಲೆಯಲ್ಲಿ ಬರಗಾಲದಿಂದ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಈವರೆಗೂ ಪರಿಹಾರ ಬಿಡುಗಡೆ ಮಾಡಿಲ್ಲ, ಹಿಂದಿನ ಸರ್ಕಾರದ ಅವಧಿಯ ಎಷ್ಟೋ ಯೋಜನೆ ನಿಂತು ಹೋಗಿವೆ. ಅನೇಕ ಕುಡಿಯುವ ನೀರಿನ ಸಮಸ್ಯೆಗೆ ಅನುದಾನ ನೀಡುತ್ತಿಲ್ಲ. ಹಣ ನೀಡಿಕೆಯಲ್ಲಿ ತಾರತಮ್ಯ ಮಾಡಲಾಗುತ್ತಿದೆ. ಇದನ್ನು ಸಚಿವರು, ಶಾಸಕರ ಗಮನಕ್ಕೆ ತರುವ ಕೆಲಸ ಮಾಡಿ ಅದನ್ನು ಬಿಟ್ಟು ಅಸ್ತಿತ್ವ ತೋರಿಸಲು ಹುರುಳಿಲ್ಲದ ಆರೋಪ ಮಾಡುವುದು ತರವಲ್ಲ ಎಂದಿದ್ದಾರೆ.
ಜಿಲ್ಲೆಯಲ್ಲಿ ಆರು ತಿಂಗಳಿಗೊಮ್ಮೆ ಅಧಿಕಾರಗಳ ವರ್ಗಾವಣೆ ಮಾಡುವ ಮೂಲಕ ಜಿಲ್ಲೆಯಲ್ಲಿ ವರ್ಗಾವಣೆ ದಂಧೆ ಮಿತಿ ಮೀರಿದೆ, ಹಿಂದಿನ ಸರ್ಕಾರದ ವಿರುದ್ಧ ಶೇ.40 ಪಸೆರ್ಂಟ್ ಆರೋಪ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷ. ಈಗ ಅದು ಹೆಚ್ಚಾಗಿದೆ ಎಂದು ನಿಮ್ಮದೇ ಪಕ್ಷದವರೇ ಮಾತನಾಡುತ್ತಿದ್ದಾರೆ. ಮೊದಲು ಅದಕ್ಕೆ ಉತ್ತರ ಕೊಡಿ. ನಿಮ್ಮ ತಟ್ಟೆಯಲ್ಲಿ ಹೆಗ್ಗಣ ಸತ್ತು ಬಿದ್ದಿದ್ದರೂ, ಬೇರೆಯವರ ತಟ್ಟೆಯಲ್ಲಿ ನೊಣ ಬಿದ್ದಿರುವುದರ ಬಗ್ಗೆ ನಾಲಗೆ ಹರಿಯ ಬಿಡುವುದು ಯಾರಿಗೂ ಶೋಭೆ ತರದು ಎಂದು ಎಚ್ಚರಿಸಿದ್ದಾರೆ.