ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸೊಸೆ ಸೀಮಂತ ಕಾರ್ಯಕ್ರಮದಲ್ಲಿ ವಾಸು, ಬೆಮೆಲ್

13Tmk_HDK_Vasu (1)
Published on

ಗುಬ್ಬಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಜತೆ ರಾಜಕೀಯವಾಗಿ, ವೈಯಕ್ತಿಕವಾಗಿ ಅಂತರ ಕಾಯ್ದುಕೊಂಡಿದ್ದ ಶಾಸಕ, ಮಾಜಿ ಸಚಿವ ಎಸ್.ಆರ್.ಶ್ರೀನಿವಾಸ್ ಸೋಮವಾರ ಕುಮಾರಸ್ವಾಮಿ ಸೊಸೆ ಸೀಮಂತ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನ ಮಾನ್ವಿ ಕನ್ವೆನ್ಷನ್ ಹಾಲ್‌ನಲ್ಲಿ ನಡೆದ ಕುಮಾರಸ್ವಾಮಿ ಸೊಸೆ ರೇವತಿ ಅವರ ಸೀಮಂತ ಕಾರ್ಯಕ್ರಮದಲ್ಲಿ ಶ್ರೀನಿವಾಸ್ ಜತೆ ಜೆಡಿಎಸ್‌ನಿಂದ ಈಗಾಗಲೇ ಒಂದು ಕಾಲು ಹೊರಗಿಟ್ಟಿರುವ ವಿಧಾನ ಪರಿಷತ್ ಸದಸ್ಯ ಬೆಮೆಲ್ ಕಾಂತರಾಜು, ಜೆಡಿಎಸ್ ಜಿಲ್ಲಾಧ್ಯಕ್ಷ ಆರ್.ಸಿ.ಆಂಜನಪ್ಪ ಭಾಗವಹಿಸಿ ರೇವತಿ ಅವರಿಗೆ ಶುಭಕೋರಿದರು.

ಎಚ್ಡಿಕೆ ಜತೆ ರಾಜಕೀಯ ಹಾಗೂ ವೈಯಕ್ತಿಕವಾಗಿ ಸಂಬಂಧಗಳನ್ನು ಬಹುತೇಕ ಕಡಿದುಕೊಂಡಿದ್ದ ಶ್ರೀನಿವಾಸ್ ಹಾಗೂ ಬೆಮೆಲ್ ಕಾಂತರಾಜು ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಲ್ಲದೆ, ಶ್ರೀನಿವಾಸ್ ಅವರ ಫೇಸ್‌ಬುಕ್ ಪೇಜ್‌ನಲ್ಲಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಫೋಟೊವನ್ನು ಹಂಚಿಕೊಂಡಿರುವುದು ಜಿಲ್ಲೆಯ ಜೆಡಿಎಸ್ ಕಾರ್ಯಕರ್ತರಲ್ಲಿ, ವಾಸಣ್ಣ ಅಭಿಮಾನಿಗಳಲ್ಲಿ ಖುಷಿಗೆ ಕಾರಣವಾಗಿದೆ.

ಎಚ್ಡಿಕೆ ಜತೆ ಅಂತರ: ಜೆಡಿಎಸ್-ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡ ಬಳಿಕ ಎಚ್ಡಿಕೆ ಕಿಚನ್ ಕ್ಯಾಬಿನೆಟ್‌ನಲ್ಲಿ ಸ್ಥಾನ ಪಡೆದಿದ್ದ ಶ್ರೀನಿವಾಸ್ ಮುನಿಸಿಕೊಂಡು ರಾಜಕೀಯವಾಗಿ ಬಹಿರಂಗ ಹೇಳಿಕೆಗಳನ್ನು ಕೊಡುವ ಮೂಲಕ ಕುಮಾರಸ್ವಾಮಿ ಅವರಿಂದ ದೂರವಾಗಿದ್ದರು. ಶಿರಾ ಉಪಚುನಾವಣೆ ಸಂದರ್ಭದಲ್ಲಿ ಕುಮಾರಸ್ವಾಮಿ ಜತೆಗಿನ ಜಿಲ್ಲಾ ಮುಖಂಡರ ಮುನಿಸು ಬಗೆಹರಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಸಭೆ ನಡೆಸಿದ್ದರಾದರೂ ಚುನಾವಣೆ ಪ್ರಚಾರ ವೇಳೆ ಎಚ್ಡಿಕೆ ಜತೆ ವೇದಿಕೆ ಕೂಡ ಹಂಚಿಕೊಳ್ಳದೆ ವಾಸು ಟೀಂ ಅಂತರ ಕಾಯ್ದಕೊಂಡಿತ್ತು. ಈ ಮುನಿಸು ರಾಜಕೀಯ ವಲಯ ಹಾಗೂ ಪಕ್ಷದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.

ಇತ್ತೀಚೆಗೆ ತುರುವೇಕೆರೆಯಲ್ಲಿ ನಡೆದ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಬೆಮೆಲ್ ಕಾಂತರಾಜು ಯಾರೆಂಬುದು ಗೊತ್ತಿಲ್ಲವೆಂದು ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಸಿಟ್ಟು ಹೊರಹಾಕಿದ್ದರು. ಅಷ್ಟರಲ್ಲಾಗಲೇ ಬೆಮೆಲ್ ಒಂದು ಸುತ್ತು ಕಾಂಗ್ರೆಸ್ ಮುಖಂಡರ ಮನೆಗಳ ಭೇಟಿ ಮುಗಿಸಿದ್ದರು. ಸೀಮಂತ ಕಾರ್ಯಕ್ರಮ ಎಚ್ಡಿಕೆ ಕುಟುಂಬದ ವೈಯಕ್ತಿಕ ಕಾರ್ಯಕ್ರಮವಾದರೂ ಹಳೆಯ ಮುನಿಸು ಮರೆತು ವಾಸು, ಬೆಮೆಲ್ ಭಾಗಿಯಾಗಿರುವುದು ರಾಜಕೀಯವಾಗಿ ವಿಶೇಷ ಅರ್ಥ ಕಲ್ಪಿಸಿದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net