

ಸೊರಬ: ಜೀನಿಯಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಕ್ಲಬ್ ಕಾನೂನು ರೀತಿ ನಡೆಯುತ್ತಿದೆ. ಇದರಲ್ಲಿ ಸಚಿವ ಮಧು ಬಂಗಾರಪ್ಪ ಅವರ ಪಾತ್ರವಿಲ್ಲ. ಆದರೆ ರಾಜಕೀಯ ದುರುದ್ದೇಶದಿಂದ ಮಾಜಿ ಸಚಿವ ಹರತಾಳು ಹಾಲಪ್ಪ ಸಮಸ್ಯೆ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದಾರೆ ಎಂದು ಜೀನಿಯಸ್ ಸ್ಪೋರ್ಟ್ಸ್ ರಿಕ್ರಿಯೇಷನ್ ಕ್ಲಬ್ ಅಧ್ಯಕ್ಷ ಶಶಿಕುಮಾರ್ ಆರೋಪಿಸಿದರು.
ಪಟ್ಟಣದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಜೀನಿಯಸ್ ರಿಕ್ರಿಯೇಷನ್ ಕ್ಲಬ್ ನಡೆಸಲು ಹೈಕೋರ್ಟ್ ಹಾಗೂ ಜಿಲ್ಲಾಕಾರಿ ನೀಡಿರುವ ಆದೇಶ ಪ್ರತಿ ಪ್ರದರ್ಶಿಸಿದರು.
ಮನರಂಜನೆಗಾಗಿ ರಿಕ್ರಿಯೇಷನ್ ಕ್ಲಬ್ ತೆರೆಯಲು ನ್ಯಾಯಾಲಯದ ಆದೇಶದನ್ವಯ ಅವಕಾಶವಿದೆ. 2015ರಲ್ಲಿ ನಮ್ಮ ಕ್ಲಬ್‌ಗೆ ಮಾನ್ಯತೆ ನೀಡಲಾಗಿದೆ. ಅದರಂತೆ ಕಾನೂನು ರೀತಿ ಕ್ಲಬ್ ನಡೆಸುತ್ತಿದ್ದು, ಮಾಜಿ ಸಚಿವ ಹರತಾಳು ಹಾಲಪ್ಪ ಅವರು ಅಕ್ರಮವಾಗಿ ಕ್ಲಬ್ ನಡೆಯಲು ಸಚಿವರ ಪಾತ್ರವಿದೆ ಎಂದು ಹೇಳಿಕೆ ನೀಡಿರುವುದು ಸತ್ಯಕ್ಕೆ ದೂರ ಎಂದು ತಿಳಿಸಿದರು.
ಈ ಕ್ಲಬ್‌ನಲ್ಲಿ ಯಾವುದೇ ಹಣದ ವ್ಯವಹಾರ ನಡೆಸುತ್ತಿಲ್ಲ. ಕರ್ನಾಟಕ ಸಂಘಗಳ ನೋಂದಣಿ ಕಾಯ್ದೆ ಅನ್ವಯ ಕ್ಲಬ್ ಆವರಣದಲ್ಲಿ ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜಿಲ್ಲೆಯ ಶಿಕಾರಿಪುರ, ಸಾಗರ, ತೀರ್ಥಹಳ್ಳಿ, ಶಿವಮೊಗ್ಗ ಮುಂತಾದ ಕ್ಷೇತ್ರಗಳಲ್ಲಿ ಮನರಂಜನೆಗಾಗಿ ಕ್ಲಬ್‌ಗಳು ಕಾರ್ಯನಿರ್ವಹಿಸುತ್ತಿವೆ. ಹಾಲಪ್ಪ ಅವರಿಗೆ ಕ್ಲಬ್ ಬಗ್ಗೆ ಗೊತ್ತಿದ್ದರೂ ಈ ರೀತಿ ಸಚಿವರ ಹೆಸರು ಹೇಳಿ ಆರೋಪಿಸಿರುವುದು ಅವರ ಹತಾಶೆಯನ್ನು ತೋರಿಸುತ್ತದೆ. ಹೈಕೋರ್ಟ್ ಆದೇಶದನ್ವಯ ನಮ್ಮ ಕ್ಲಬ್ ಕಾರ್ಯನಿರ್ವಹಿಸುತ್ತಿದೆ. ಇದಕ್ಕೆ ಅನಗತ್ಯವಾಗಿ ಬೇರೆಯವರ ಹೆಸರು ಎಳೆದುತರುವುದು ರಾಜಕೀಯ ದುರುದ್ದೇಶ ಎಂದರು.
ಕಾರ್ಯದರ್ಶಿ ನಾಗರಾಜ, ನಿರ್ದೆಶಕ ಚಂದ್ರಪ್ಪ ಸುದ್ದಿಗೋಷ್ಠಿಯಲ್ಲಿದ್ದರು.