ಮಾಜಿ ಸಚಿವರ ಕಾರನ್ನೇ ಕದ್ದ ಕಳ್ಳರು

Shivanna (kote) copy
ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಕೋಟೆ
Published on

ಮೈಸೂರು: ಮುಸುಕುಧಾರಿ ಕಳ್ಳರು ಕಾಂಪೌಂಡ್ ಒಳಗೆ ನಿಲ್ಲಿಸಿದ್ದ ಮಾಜಿ ಸಚಿವರ ಕಾರನ್ನೇ ಕದ್ದೊಯ್ದಿದ್ದಾರೆ.
ಮಾಜಿ ಸಚಿವ ಎಚ್.ಡಿ.ಕೋಟೆ ಎಂ.ಶಿವಣ್ಣ ಅವರ ಕಾರನ್ನು ಕಳವು ಮಾಡಲಾಗಿದ್ದು, ಮೂವರಿಂದ ಈ ಕೃತ್ಯ ನಡೆದಿದೆ. ಕಾರು ಕಳವು ಕುರಿತು ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೈಸೂರಿನ ವಿಜಯನಗರ ಬಡಾವಣೆಯಲ್ಲಿ ವಾಸವಿರುವ ಎಂ.ಶಿವಣ್ಣ ಅವರ ಮನೆಯ ಕಾಂಪೌಂಡ್ ಒಳಗೆ ಇನ್ನೋವಾ ಕಾರನ್ನು ನಿಲ್ಲಿಸಲಾಗಿತ್ತು. ಮಂಗಳವಾರ ರಾತ್ರಿ ಮೂವರು ಮುಸುಕುಧಾರಿಗಳು ಕಾಂಪೌಂಡ್ ಒಳಗೆ ನುಗ್ಗಿ ಕೈಗೆ ಸಿಗುವಂತೆ ಮನೆಯಲ್ಲಿದ್ದ ಕೀ ಅನ್ನು ಕದ್ದು ಕಾರು ಕಳವು ಮಾಡಿದ್ದಾರೆ. ಈ ವೇಳೆ ಮನೆಯಲ್ಲಿ ಕುಟುಂಬದವರು ಮಲಗಿದ್ದರೂ ವಿಷಯ ಗೊತ್ತಾಗಿಲ್ಲ.
ಬೆಳಗ್ಗೆ ಕಾರು ಇಲ್ಲದಿರುವುದನ್ನು ಕಂಡ ಎಂ.ಶಿವಣ್ಣ ಅವರು ಚಾಲಕ ಹಾಗೂ ಮನೆಯವರನ್ನು ವಿಚಾರಿಸಿದ್ದಾರೆ. ಯಾರು ಕಾರನ್ನು ತೆಗೆದುಕೊಂಡು ಹೋಗಿಲ್ಲ ಎಂಬುದು ತಿಳಿದ ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು, ಸಿಸಿ ಕ್ಯಾಮರಾದಲ್ಲಿ ದಾಖಲಾಗಿರುವ ದೃಶ್ಯ ಪರಿಶೀಲಿಸಲಾಗ ಮಧ್ಯರಾತ್ರಿ ಒಂದು ಗಂಟೆ ಸುಮಾರಿಗೆ ಕಾಂಪೌಂಡ್ ಹಾರಿ ಒಳ ನುಗ್ಗಿದ ಮುಸುಕುಧಾರಿಗಳು ಕಾರನ್ನು ಕದಿಯುತ್ತಿರುವುದು ಕಂಡುಬಂದಿದೆ.
ದಾಖಲೆ, ವಿಗ್ರಹ ತಂದಿಟ್ಟ ಕಳ್ಳರು: ಕಾರನ್ನು ಕದ್ದ ಕಳ್ಳರು ಸ್ವಲ್ಪ ಸಮಯದ ಬಳಿಕ ಕಾರಿನಲ್ಲಿ ಇಟ್ಟಿದ್ದ ವಿವಿಧ ಫೈಲ್‌ಗಳು, ಕಾರಿನ ಡ್ಯಾಶ್ ಬೋರ್ಡ್‌ನಲ್ಲಿ ಹಾಕಿದ್ದ ಗಣೇಶನ ಮೂರ್ತಿಯನ್ನು ವಾಪಸ್ ಇಟ್ಟು ಹೋಗಿರುವುದು ಸಿಸಿ ಟಿವಿ ದೃಶ್ಯದಲ್ಲಿ ದಾಖಲಾಗಿದೆ.
20 ವರ್ಷದಲ್ಲಿ ಇಂತಹ ಘಟನೆ ಆಗಿರಲಿಲ್ಲ. ಜೂ.5 ರಂದು ಎಚ್.ಡಿ.ಕೋಟೆಗೆ ಹೋಗಿ ಬಂದು ರಾತ್ರಿ 8 ಗಂಟೆಗೆ ಕಾರು ನಿಲ್ಲಿಸಿ ಚಾಲಕ ಕೀ ಇಟ್ಟು ಹೋಗಿದ್ದ. ಬೆಳಗ್ಗೆ ಎದ್ದು ನೋಡಿದರೆ ಕಾರು ಇರಲಿಲ್ಲ. ಎಲ್ಲರನ್ನೂ ವಿಚಾರಿಸಿದ ಬಳಿಕ ಪೊಲೀಸ್ ಕಮಿಷನರ್‌ಗೆ ದೂರು ನೀಡಿದೆ. ಈ ರಸ್ತೆಯಲ್ಲಿ ಹಲವು ಕಾರುಗಳು ನಿಲ್ಲುತ್ತವೆ. ಆದರೆ ನಮ್ಮ ಮನೆಯಲ್ಲಿ ಕಳ್ಳತನವಾಗಿದೆ ಎಂದು ಎಂ.ಶಿವಣ್ಣ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ನನ್ನ ಬಳಿ ಕೆಲಸ ಮಾಡಿದವರು ಯಾರೋ ಕೃತ್ಯ ಮಾಡಿದ್ದಾರೆ ಎಂದು ನನಗೆ ಅನಿಸುತ್ತಿಲ್ಲ. ಆದರೆ ವ್ಯವಸ್ಥಿತವಾಗಿ ಕಾರು ಕಳ್ಳತನ ಆಗಿದೆ. ಹೊರ ರಾಜ್ಯದವರೋ, ಇಲ್ಲಿಯವರೋ ಗೊತ್ತಾಗುತ್ತಿಲ್ಲ. ಕಾಂಪೌಂಡ್ ಹಾರಿ ಮನೆ ಪ್ರವೇಶ ಮಾಡಿರುವುದೇ ತುಂಬಾ ಭಯ ಹುಟ್ಟಿಸುತ್ತಿದೆ. ಈ ಬಗ್ಗೆ ಡಿಜಿ, ಐಜಿ, ಗೃಹ ಸಚಿವರನ್ನು ಖುದ್ದು ಭೇಟಿ ಮಾಡಿ ದೂರು ನೀಡುತ್ತೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net