ಮಾಜಿ ಸಚಿವ ವಿನಯ ಕುಲಕರ್ಣಿ ಬಂಡೆ ಇದ್ದಂತೆ

8-55
ಚನ್ನಮ್ಮ ಕಿತ್ತೂರಿನಲ್ಲಿ ವಿನಯ ಕುಲಕರ್ಣಿ ಜನ್ಮದಿನ ನಿಮಿತ್ತ ಆಯೋಜಿಸಿದ್ದ ಜನ ನಮನ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ, ಡಾ.ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಪ್ರಸಾದ ಅಬ್ಬಯ್ಯ, ಎಂ.ಬಿ.ಪಾಟೀಲ, ಡಿ.ಬಿ.ಇನಾಂದಾರ, ಬಾಬಾಸಾಹೇಬ ಪಾಟೀಲ ಇತರರು ಇದ್ದರು.
Published on

ಚನ್ನಮ್ಮನ ಕಿತ್ತೂರು, ಬೆಳಗಾವಿ: ಬಂಡೆಯಂತೆ ಇರುವ ವಿನಯ ಕುಲಕರ್ಣಿ ವಿರುದ್ಧ ಷಡ್ಯಂತ್ರ ರಚಿಸಿ ಪೆಟ್ಟು ನೀಡುತ್ತಿದ್ದಾರೆ. ಇದರಿಂದ ಬಂಡೆ ಮೂರ್ತಿಯಾಗುತ್ತದೆ ಹೊರತು ಬೇರೇನೂ ಆಗಲೂ ಸಾಧ್ಯವಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದರು. ಪಟ್ಟಣದ ಹೆದ್ದಾರಿ ಪಕ್ಕದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಹುಟ್ಟುಹಬ್ಬದ ನಿಮಿತ್ತ ಸೋಮವಾರ ಆಯೋಜಿಸಿದ್ದ ಜನ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ನಮಗೆ ಅನೇಕ ಕಷ್ಟ ನೀಡುತ್ತಿದೆ. ಹುಟ್ಟಿದ ಸೂರ್ಯ ಮುಳುಗಲೇಬೇಕು. ಮಹಾನ್ ಚಕ್ರವರ್ತಿಗಳೇ ಮಣ್ಣು ಸೇರಿದ್ದಾರೆ. ಇಲ್ಲಿ ಯಾವುದೂ ಶಾಶ್ವತವಲ್ಲ ಎಂದರು.

ರಾಜಕೀಯವಾಗಿ ನಮ್ಮನ್ನು ಸೋಲಿಸಲಾಗದೆ ಕುತಂತ್ರ ಮಾಡುವ ನಾಯಕರಿಗೆ ಉತ್ತರ ನೀಡಲು ನಾನಿಲ್ಲಿ ಬಂದಿದ್ದೇನೆ. ನಮ್ಮ ಪಕ್ಷದ ಜಾಲತಾಣ ಖಾತೆ ಬಂದ್ ಮಾಡಿಸಿದರು. ನಮ್ಮೆಲ್ಲರನ್ನು ಜೈಲಿಗಟ್ಟಿದರೂ ಜನರ ಮನದಲ್ಲಿ ನಾವಿದ್ದೇವೆ, ರಾಹುಲ್ ಗಾಂಧಿ ಎಲ್ಲದಕ್ಕೂ ಸಿದ್ಧರಾಗಿದ್ದಾರೆ. ಕರ್ನಾಟಕದ ಜನರು ಸಜ್ಜಾಗಿ ಸಂಕಲ್ಪ ಮಾಡಿ ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಗೆಲ್ಲಿಸುವಂತೆ ಮನವಿ ಮಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ವಾಮಮಾರ್ಗ, ಕುತಂತ್ರ ಬುದ್ಧಿಯಿಂದ, ಷಡ್ಯಂತ್ರ ರಚಿಸಿ ರಾಜಕಾರಣ ಮಾಡಲು ಬಿಜೆಪಿಯವರು ನಿಸ್ಸೀಮರು. ಬಹುಮತ ಸಿಗದ ಸಂದರ್ಭದಲ್ಲಿ ಶಾಸಕರನ್ನು ಖರೀದಿಸಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ. ನಮ್ಮ ಸರ್ಕಾರ ಇದ್ದಾಗ 8 ಪ್ರಕರಣಗಳನ್ನು ಸಿಬಿಐಗೆ ನೀಡಿದ್ದೇನೆ. ಆದರೆ, ಬೊಮ್ಮಾಯಿ ಅವರು ಒಂದಾದರೂ ಪ್ರಕರಣವನ್ನು ಸಿಬಿಐಗೆ ನೀಡಿದ್ದಾರೆಯೇ ಎಂದು ಪ್ರಶ್ನಿಸಿದರು.

ಕೂಡಲಸಂಗಮ ಶ್ರೀ, ತೋಂಟದಾರ್ಯ ಮಠದ ಶ್ರೀ, ಮುರುಘಾಮಠದ ಶ್ರೀ, ಬೈಲೂರು ನಿಷ್ಕಲ ಮಂಟಪದ ಶ್ರೀ, ಕಲ್ಮಠದ ಶ್ರೀ, ನಿಚ್ಚಣಕಿ ಶ್ರೀ ಸಾನ್ನಿಧ್ಯ ವಹಿಸಿದ್ದರು. ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಡಾ.ಅಂಜಲಿ ನಿಂಬಾಳ್ಕರ್, ಮಹಾಂತೇಶ ಕೌಜಲಗಿ, ಪ್ರಸಾದ ಅಬ್ಬಯ್ಯ, ಮಾಜಿ ಸಚಿವರಾದ ಎಂ.ಬಿ.ಪಾಟೀಲ, ಡಿ.ಬಿ.ಇನಾಂದಾರ, ಮುಖಂಡರಾದ ಸಲೀಂ ಅಹ್ಮದ್, ಶಿವಾನಂದ ಪಾಟೀಲ, ಎ.ಬಿ.ಪಾಟೀಲ, ಬಾಬಾಸಾಹೇಬ ಪಾಟೀಲ, ವಿಜಯಾನಂದ ಕಾಶಪ್ಪನವರ, ರೋಹಿಣಿ ಬಾಬಾಸಾಹೇಬ ಪಾಟೀಲ, ವೀಣಾ ಕಾಶಪ್ಪನವರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net