ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿಗೆ ಟಾಂಗ್, ಶಾಸಕ ಡಾ.ದೇವಾನಂದ ಚವಾಣ್ ಹೇಳಿಕೆ, ರೇವಣಸಿದ್ಧೇಶ್ವರ ಏತ ನೀರಾವರಿ ಬಗ್ಗೆ ಸದನದಲ್ಲಿ ಧ್ವನಿ ಎತ್ತಿರುವೆ

IMG-20210426-WA0047
Published on

ವಿಜಯಪುರ: ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಬಗ್ಗೆ ನಾಗಠಾಣ ಕ್ಷೇತ್ರದ ಶಾಸಕರು ಸದನದಲ್ಲಿ ಮಾತನಾಡಬೇಕೆಂದಿರುವ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿಗೆ ತಿರುಗೇಟು ನೀಡಿರುವ ಶಾಸಕ ಡಾ.ದೇವಾನಂದ ಚವಾಣ್ ಈ ಯೋಜನೆಗೆ ಬಜೆಟ್‌ನಲ್ಲಿ ಅನುದಾನ ಮೀಸಲಿಟ್ಟಿದ್ದೇ ನಮ್ಮ ಸರ್ಕಾರ ಎಂದಿದ್ದಾರೆ.

ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆ ಅನುಷ್ಟಾನಕ್ಕೆ ಸಂಬಂಧಿಸಿದಂತೆ ಸದನದ ಒಳಗೆ ಹಾಗೂ ಹೊರಗೆ ಮಾತನಾಡಿದ್ದೇನೆ. ಅಲ್ಲದೇ ಈ ನೀರಾವರಿ ಯೋಜನೆ ಅನುಷ್ಟಾನಕ್ಕೆ ಹೋರಾಟ ನಡೆಸುತ್ತಿರುವುದೇ ನಮ್ಮ ಪಕ್ಷದ ಕಾರ್ಯಕರ್ತರು ಎಂದು ಟಾಂಗ್ ನೀಡಿದ್ದಾರೆ.

ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಅವರು ಮಾತಿನ ಭರದಲ್ಲಿ ನಾಗಠಾಣ ಶಾಸಕರು ಸದನದಲ್ಲಿ ರೈತರ ಯೋಜನೆ ಬಗ್ಗೆ ಮಾತನಾಡಬೇಕೆಂದಿದ್ದಾರೆ. ಆದರೆ, ನಾನು ಸೆ.14 ರಂದೇ ಸದನದಲ್ಲಿ ಧ್ವನಿ ಎತ್ತಿದ್ದೇನೆ. ಇನ್ನು ಧರಣಿಗೂ ಬೆಂಬಲ ನೀಡಿದ್ದೇನೆ. ನಾವು ಯಾವತ್ತೂ ರೈತರ ಪರವಾಗಿದ್ದೇವೆ. ಸದನದಲ್ಲಿ ಈ ವಿಷಯ ಪ್ರಸ್ತಾಪಿಸಿದ್ದು ಮಾಜಿ ಸಚಿವರು ಗಮನಿಸಿದಂತಿಲ್ಲ ಎಂದಿದ್ದಾರೆ.

ಬೇರೊಬ್ಬರ ಬಗ್ಗೆ ಟೀಕೆ ಮಾಡುವ ಮುನ್ನ ವಿಚಾರಿಸಿ ಮಾತನಾಡಬೇಕು. ನಾನು ಅಧಿಕಾರಕ್ಕೆ ಬಂದಿರುವುದು ರೈತರಿಂದ, ರೈತರೇ ನನ್ನ ಉಸಿರು, ಅವರ ಸಲುವಾಗಿ ನಾನು ನಿರಂತರ ಹೋರಾಟ ಮಾಡುತ್ತೇನೆ. ಇದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಬಿಜೆಪಿ ಸರ್ಕಾರ ಉತ್ತರ ಕರ್ನಾಟಕಕ್ಕೆ ಅನುದಾನ ನೀಡದೆ ಮಲತಾಯಿ ಧೋರಣೆ ಮಾಡುತ್ತಿದೆ. ವಿಶೇಷವಾಗಿ ನನ್ನ ಕ್ಷೇತ್ರದ ಯೋಜನೆಗಳಿಗೆ ಮೀನಮೇಷ ಎಣಿಸುತ್ತಿದೆ. ಹೀಗಾಗಿ ಅಭಿವೃದ್ಧಿಗೆ ಅಡ್ಡಿಯಾಗುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net