

ಚನ್ನಪಟ್ಟಣ
ಮಾಗಡಿಯ ಮಾಜಿ ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವುದಾದರೆ ಸ್ವಾಗತಿಸುತ್ತೇವೆ. ಅವರಿಗೆ ಪಕ್ಷದಲ್ಲಿ ಒಳ್ಳೆಯ ಅವಕಾಶ ಇದೆ, ಅವರು ಮನಸ್ಸು ಮಾಡಬೇಕು ಎನ್ನುವ ಮೂಲಕ ಜಿಲ್ಲೆಯ ಪ್ರಮುಖ ಕಾಂಗ್ರೆಸ್ ನಾಯಕ ಎಚ್.ಸಿ. ಬಾಲಕೃಷ್ಣ ಅವರಿಗೆ ಮಾಜಿ ಸಚಿವ, ಮೇಲ್ಮನೆ ಸಚಿವ ಸಿ.ಪಿ.ಯೋಗೇಶ್ವರ್ ಬಹಿರಂಗ ಆಹ್ವಾನ ನೀಡಿದರು.
ತಾಲೂಕಿನ ನೀಲಕಂಠನಹಳ್ಳಿಯಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಕಾಂಗ್ರೆಸ್ನಲ್ಲಿ ಗೊಂದಲದ ವಿಚಾರ ಹಾಗೂ ಕೆಪಿಸಿಸಿ ಅಧ್ಯಕ್ಷರಿಗೆ ಬಾಲಕೃಷ್ಣ ಪತ್ರ ಬರೆದಿರುವ ವಿಚಾರದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲ. ಆದರೆ, ಬಾಲಕೃಷ್ಣ ರಾಮನಗರ ಜಿಲ್ಲೆಯಲ್ಲಿ ಮೊದಲ ಬಿಜೆಪಿ ಶಾಸಕರಾಗಿದ್ದವರು. ಸಾಕಷ್ಟು ಹೋರಾಟಗಳ ಮೂಲಕ ಸಾಗಿ ಬಂದವರು. ನಾನೂ ಸಹ ಈ ಹಿಂದೆ ಹಲವು ಬಾರಿ ಅವರನ್ನು ಬಿಜೆಪಿಗೆ ಆಹ್ವಾನಿಸಿದ್ದೆ. ಆದರೆ, ಅವರು ಕಾಂಗ್ರೆಸ್ನಲ್ಲೇ ಮುಂದುವರಿಯುತ್ತೇನೆ ಎಂದಿದ್ದರು. ಇದೀಗ, ಅವರು ಬಿಜೆಪಿಗೆ ಬರುವುದಾದರೆ ತುಂಬು ಹೃದಯದಿಂದ ಸ್ವಾಗತಿಸುತ್ತೇನೆ. ಅವರಿಗೆ ನಮ್ಮ ಪಕ್ಷದಲ್ಲಿ ಒಳ್ಳೆಯ ಭವಿಷ್ಯ ಇರುತ್ತದೆ. ಪಕ್ಷಕ್ಕೆ ಬರುವ ಬಗ್ಗೆ ಅವರು ಮನಸ್ಸು ಮಾಡಬೇಕು ಎಂದು ತಿಳಿಸಿದರು.
ಇನ್ನು ಕಾಂಗ್ರೆಸ್ನಲ್ಲಿ ಸಿಎಂ ಕುರ್ಚಿಗಾಗಿ ಗದ್ದಲ,ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನರಾಗದ ಬಗ್ಗೆ ಪ್ರತಿಕ್ರಿಯಿಸಿದ ಯೋಗೇಶ್ವರ್, ಅದು ಕಾಂಗ್ರೆಸ್ನ ಆಂತರಿಕ ವಿಚಾರ. ಅದರ ಬಗ್ಗೆ ನಾನೇಕೆ ಪ್ರತಿಕ್ರಿಯಿಸಲಿ.ನಿನ್ನೆಯ ಡಿ.ಕೆ.ಶಿವಕುಮಾರ್ ಹೇಳಿಕೆ ಗಮನಿಸಿದ್ದೇನೆ,ನಾನು ಪಕ್ಷಕ್ಕಾಗಿ ದುಡಿದೆ, ಆದರೆ ತೊಂದರೆಯಾಗುತ್ತಿದೆ ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ನಲ್ಲಿ ಸಿದ್ದರಾಮಯ್ಯನವರು ಸಿಎಂ ಆಗಿದ್ದವರು, ಆ ಪಕ್ಷದಲ್ಲಿಇಬ್ಬರೂ ಪ್ರಬಲರಾಗಿದ್ದಾರೆ. ಮುಂದೆ ಕಾದು ನೋಡೋಣ ಎಂದರು.
ತಾಲೂಕಿನ ನೀಲಕಂಠನಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಿರುವ ಯಲ್ಲಮ್ಮ ಗುರುಮೂರ್ತಿ ದೇವಾಲಯ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಿ.ಪಿ.ಯೋಗೇಶ್ವರ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ದೇವಿಯ ಮೆರವಣಿಗೆಗೆ ತಂದಿದ್ದ ರಾಣಿಬೆನ್ನೂರಿನ ಹೊಳೆಮಠದ ಆನೆಯ ಆಶೀರ್ವಾದ ಪಡೆದರು.
ಬಿಜೆಪಿ ಮುಖಂಡರಾದ ತಗಚಗೆರೆ ಕುಳ್ಳಪ್ಪ, ಸಿ.ಪಿ.ನಾಗೇಶ್, ಕಿರಣ್ಕುಮಾರ್, ಜಯಂತ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.