

ಕೊಳ್ಳೇಗಾಲ: ತಾಲೂಕಿನ ತೆಳ್ಳನೂರು-ಬಂಡಳ್ಳಿ ಮಾರ್ಗ ಮಧ್ಯದಲ್ಲಿ ಸಂಭವಿಸಿದ ಬಸ್ ಅಪಘಾತದಲ್ಲಿ ಗಾಯಗೊಂಡು ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಮಾಜಿ ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್ ಹಾಗೂ ಎಸ್.ಬಾಲರಾಜು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಭಾನುವಾರ ರಾತ್ರಿ ನಡೆದ ಅಪಘಾತದಲ್ಲಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮಾಹಿತಿ ತಿಳಿದು ಮಾಜಿ ಶಾಸಕ ಆರ್.ನರೇಂದ್ರ ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡವರಿಗೆ ಧೈರ್ಯ ಹೇಳಿದರು. ಅಂತೆಯೇ, ಮಾಜಿ ಶಾಸಕ ಎಸ್. ಬಾಲರಾಜು ಸಹ ಗಾಯಾಳುಗಳ ಆರೋಗ್ಯ ಪರಿಸ್ಥಿತಿಯನ್ನು ವಿಚಾರಿಸಿದರು.
ಸೋಮವಾರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಶಾಸಕ ಎನ್.ಮಹೇಶ್ ಅವರು ಸಹ ಆಸ್ಪತ್ರೆಗೆ ಭೇಟಿ ನೀಡಿದರು. ಗಾಯಾಳುಗಳು ದಾಖಲಾಗಿದ್ದ ವಾರ್ಡ್‌ಗಳಿಗೆ ತೆರಳಿ ಸ್ಥಳದಲ್ಲಿದ್ದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ರಾಜಶೇಖರ್ ಅವರ ಬಳಿ ಗಾಯಾಳುಗಳ ಮಾಹಿತಿ ಪಡೆದರು.
ಈ ವೇಳೆ ಮಾಜಿ ಶಾಸಕ ಎನ್.ಮಹೇಶ್ ಮಾತನಾಡಿ, ಅಪಘಾತದಲ್ಲಿ ಬಸ್ ಕ್ಲೀನರ್ ನವೀನ್‌ಕುಮಾರ್ ಮೃತಪಟ್ಟಿದ್ದಾರೆ. 67 ಜನರು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. 22 ಜನರನ್ನು ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಗಾಯಾಳುಗಳು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು.
ಉಪವಿಭಾಗಾಧಿಕಾರಿ ಭೇಟಿ: ರಾತ್ರಿ ಅಪಘಾತ ಮಾಹಿತಿ ತಿಳಿದ ಎಸಿ ಬಿ.ಆರ್.ಮಹೇಶ್ ಕೊಳ್ಳೇಗಾಲ ಆಸ್ಪತ್ರೆಗೆ ಭೇಟಿ ನೀಡಿದರು. ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಹೆಚ್ಚಿನ ಚಿಕಿತ್ಸೆ ಅವಶ್ಯಕತೆ ಇದ್ದರೆ ಜಿಲ್ಲಾಸ್ಪತ್ರೆಗೆ ಕಳುಹಿಸಿ ಕೊಡುವಂತೆ ವ್ಯೆದ್ಯರಿಗೆ ತಿಳಿಸಿದರು. ಗಾಯಾಳುಗಳ ಸಂಬಂಧಿಕರಿಗೆ ಧೈರ್ಯ ತುಂಬಿದರು.
ಎಸ್ಪಿ ಭೇಟಿ: ಅಪಘಾತದಲ್ಲಿ ಗಾಯಗೊಂಡವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು. ಈ ವೇಳೆ ಡಿವೈಎಸ್ಪಿ ಧಮೇಂದ್ರ, ಕೊಳ್ಳೇಗಾಲ ಪಟ್ಟಣ ಠಾಣೆಯ ಪಿಎಸ್‌ಐ ಬಿ.ವರ್ಷಾ ಇತರರು ಇದ್ದರು.