

ಬೀದರ್: ಇಲ್ಲಿನ ಮಾಜಿ ಶಾಸಕ ಸೈಯದ್ ಜುಲ್ಪೇಕಾರ್ ಹಾಸ್ಮಿ (55) ನಿಧನ ಹೊಂದಿದ್ದಾರೆ.
ಕೆಲ ದಿನಗಳಿಂದ ಬಹು ಅಂಗಾಗ ವೈಫಲ್ಯದಿಂದ ಬಳಲುತ್ತಿದ್ದ ಹಾಸ್ಮಿ ಅವರು ಹೈದರಾಬಾದ್ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗಿನ ಜಾವ ಕೊನೆಯುಸಿರೆಳೆದಿದ್ದಾರೆ. ಕಿಡ್ನಿ ಸೇರಿ ವಿವಿಧ ಕಾಯಿಲೆಗಳಿಂದ ಹಾಸ್ಮಿ ಬಳಲುತ್ತಿದ್ದರು. ಹೀಗಾಗಿ ಒಂದು ವರ್ಷದಿಂದ ರಾಜಕೀಯ ಚಟುವಟಿಕೆಗಳಿಂದ ದೂರ ಇದ್ದರು.
1994ರ ವಿಧಾನಸಭೆ ಚುನಾವಣೆಯಲ್ಲಿ ಹಾಸ್ಮಿ ಅವರು ಮೊದಲ ಸಲ ಬಿಎಸ್ಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ಈ ಮೂಲಕ ಪ್ರಥಮ ಬಾರಿಗೆ ದಕ್ಷಿಣ ಭಾರತದಲ್ಲೇ ಮೊದಲ ಬಿಎಸ್ಪಿ ಶಾಸಕರಾಗಿ ಆಯ್ಕೆಯದ ಹೆಗ್ಗಳಿಗೆ ಅವರ ಹೆಸರಲ್ಲಿತ್ತು.
1994ರ ಬಳಿಕ ಹಾಸ್ಮಿ ಜೆಡಿಎಸ್, ಕಾಂಗ್ರೆಸ್ ಇತರೆ ಪಕ್ಷಗಳಲ್ಲಿ ಗುರುತಿಸಿಕೊಂಡರು. ನಂತರ ಎರಡು ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತರು. ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.
ನಗರದ ದುಲ್ಹನ್ ದರ್ವಾಜಾ ನಿವಾಸಿಯಾದ ಹಾಸ್ಮಿ ಅವರು ತೀರ ಬಡ ಕುಟುಂಬದಿಂದ ಬಂದಿದ್ದು, ಒಂದೊಮ್ಮೆ ಕಾರ್ಮಿಕ ಕೆಲಸ ಮಾಡುತ್ತಿದ್ದರು. ಮಂಗಳವಾರ ಮಧ್ಯಾಹ್ನ ನಗರದ ಹೊರ ವಲಯದ ಅಷ್ಟೂರ್ ಸಮೀಪ ಅಂತ್ಯಕ್ರಿಯೆ ನಡೆಯಿತು.