ಮಾಜಿ ಶಾಸಕ ಸಜ್ಜನರ ಹಣಕ್ಕೂ ಕನ್ನ!

21-hvr-05
Published on

ಪರಶುರಾಮ ಕೆರಿ ಹಾವೇರಿ: ಜಿಲ್ಲೆಯಲ್ಲಿ ಬೆಳೆ ಹಾನಿ ಅಕ್ರಮ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಾವೇರಿ ಮಾಜಿ ಶಾಸಕ, ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಶಿವರಾಜ ಸಜ್ಜನರ ಅವರಿಗೆ ಸೇರಬೇಕಿದ್ದ ಹಣಕ್ಕೂ ಕನ್ನ ಹಾಕಿದ್ದಾರೆ.

ಇದುವರೆಗೆ ಕೇವಲ ಪರಿಹಾರ ತಂತ್ರಾಂಶದಲ್ಲಿ ಜಮೀನು ಹೊಂದಿದ ಖಾತೆದಾರನ ಹೆಸರನ್ನು ಹಾಕಿ ಬೇರೆಯವರ ಖಾತೆಗೆ ಹಣ ಹಾಕಿರುವ ಪ್ರಕರಣಗಳು ಮಾತ್ರ ಬೆಳಕಿಗೆ ಬಂದಿದ್ದವು. ಇದೀಗ ಜಮೀನು ಹೊಂದಿದ ಖಾತೆದಾರನ ಹೆಸರನ್ನು ಪರಿಹಾರ ತಂತ್ರಾಂಶದಲ್ಲಿ ಹಾಕದೇ ನೇರವಾಗಿ ಅನರ್ಹ ಫಲಾನುಭವಿಯ ಹೆಸರನ್ನು ನಮೂದಿಸಿ ಸರ್ವೆ ನಂಬರ್ ಮಾತ್ರ ಬಳಕೆ ಮಾಡಿಕೊಂಡಿದ್ದಾರೆ.

ಪತ್ತೆಗೂ ಕಷ್ಟಕರ:ಈ ಅಕ್ರಮವನ್ನು ಯಾರೂ ಸುಲಭವಾಗಿ ಪತ್ತೆ ಮಾಡಲು ಸಾಧ್ಯವಿಲ್ಲ. ಪರಿಹಾರ ತಂತ್ರಾಂಶದಲ್ಲಿ ಹೆಸರು ಬರದೇ ಇದ್ದವರು ನಮಗೆ ಪರಿಹಾರ ಬಂದಿಲ್ಲ ಎಂದು ಸುಮ್ಮನಾಗಿದ್ದರು. ಈ ಪ್ರಕರಣವನ್ನು ಗಮನಿಸಿದರೆ ಗೋಲ್ಮಾಲ್​ನ ಜಾಲ ಬಹುದೊಡ್ಡದಾಗಿದ್ದು, ಪ್ರತಿಯೊಂದು ಸರ್ವೆ ನಂಬರ್​ಗಳನ್ನು ಖಾತೆಯ ಮಾಲೀಕರ ಹೆಸರಿನಲ್ಲಿ ಮ್ಯಾಚ್ ಮಾಡುತ್ತ ಹೋದಾಗ ಮಾತ್ರ ಪತ್ತೆ ಮಾಡಲು ಸಾಧ್ಯವಿದೆ. ಈ ರೀತಿಯ ಜಾಣ್ಮೆಯನ್ನು ಗ್ರಾಮಲೆಕ್ಕಾಧಿಕಾರಿಗಳು ನಡೆಸಿದ್ದಾರೆ.

ಮಾಜಿ ಶಾಸಕರ ಜಮೀನಿನ ಮೇಲೆ ಇಬ್ಬರಿಗೆ ಪರಿಹಾರ: ಸರ್ಕಾರ ಒಬ್ಬ ವ್ಯಕ್ತಿ ಎಷ್ಟೇ ಜಮೀನು ಹೊಂದಿದ್ದರೂ ಅವನಿಗೆ ಗರಿಷ್ಠ 5 ಎಕರೆಗೆ ಪರಿಹಾರ ನೀಡುವ ನಿಯಮ ಮಾಡಿದೆ. ಆದರೆ, ಇಲ್ಲಿ ಶಿವರಾಜ ಸಜ್ಜನರ ದೇವಗಿರಿ ಗ್ರಾಮದಲ್ಲಿ ಸರ್ವೆ ನಂಬರ್ 71//ನ ಹೆಸರಿನಲ್ಲಿ ಜಮೀನು ಹೊಂದಿದ್ದಾರೆ. ಈ ಜಮೀನಿನ ಸರ್ವೆ ನಂಬರ್ ಮಾತ್ರ ಬಳಸಿ ಆ ಗ್ರಾಮದವರೇ ಅಲ್ಲದ ಮಹಾದೇವಕ್ಕ ಗಾಣಿಗೇರ ಅವರ ಐಡಿಬಿಐ ಬ್ಯಾಂಕ್ ಖಾತೆಗೆ ಹಾಗೂ ಶಿವಾನಂದ ಗಾಣಿಗೇರ ಎಂಬುವವರ ಸಿಂಡಿಕೇಟ್ ಬ್ಯಾಂಕ್ ಖಾತೆಗೆ ತಲಾ 46,528 ರೂ. ಹಣ ಜಮೆಯಾಗಿದೆ. ಮೂಲ ಖಾತೆದಾರ ಶಿವರಾಜ ಸಜ್ಜನರ ಅವರ ಹೆಸರು ಸಾರ್ವಜನಿಕ ಮಾಹಿತಿಗೆ ಪರಿಹಾರ ವೆಬ್​ಸೈಟ್​ನಲ್ಲಿ ಬಿಟ್ಟಿರುವ ತಂತ್ರಾಂಶದಲ್ಲಿ ಎಲ್ಲಿಯೂ ನಮೂದಾಗಿಲ್ಲ. ಹೀಗಾಗಿ ಇದು ಬಹುಬೇಗ ಪತ್ತೆಯಾಗಿರಲಿಲ್ಲ.

ತಂತ್ರಾಂಶವೇ ದುರ್ಬಳಕೆ: ಇಲ್ಲಿ ತಂತ್ರಾಂಶವಯ ಅಕ್ರಮದಾರರಿಗೆ ಸಾಥ್ ನೀಡಿದೆಯೋ ಅಥವಾ ಅವರೇ ಅದನ್ನು ತಮಗೆ ಬೇಕಾದಂತೆ ಬಳಸಿಕೊಂಡರೋ ಎಂಬುದರ ಮೇಲೆಯೂ ತನಿಖೆಯಾಗಬೇಕಿದೆ. ಇಷ್ಟೆಲ್ಲ ಗೋಲ್ಮಾಲ್ ನಡೆಯುತ್ತಿರುವುದು ಹಿರಿಯ ಅಧಿಕಾರಿಗಳ ಗಮನಕ್ಕೆ ಬರದೇ ಇರುವುದು ಅಚ್ಚರಿಗೆ ಕಾರಣವಾಗಿದೆ.

ಅವ್ಯವಹಾರ ತನಿಖೆಗೆ ಒತ್ತಾಯ: ಜಿಲ್ಲೆಯಲ್ಲಿ ಈ ರೀತಿ ಅನೇಕ ರೈತರಿಗೆ ನೆರೆ ಪರಿಹಾರ ಸಿಕ್ಕಿಲ್ಲ. ಈ ಕುರಿತು ಉಸ್ತುವಾರಿ ಸಚಿವರು ಈಗಾಗಲೇ ತನಿಖೆಗೆ ಸೂಚಿಸಿದ್ದಾರೆ. ಅದೇ ರೀತಿ ಜಿಲ್ಲಾದ್ಯಂತ ಆಗಿರುವ ಅವ್ಯವಹಾರಗಳ ತನಿಖೆಯಾಗಬೇಕು. ಅರ್ಹರಿಗೆ ಪರಿಹಾರ ಸಿಗಬೇಕು. ಈ ಗೋಲ್‍ಮಾಲ್ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿ ಜಿಲ್ಲಾಧಿಕಾರಿಗೂ ದೂರು ನೀಡುತ್ತೇನೆ. ಮನೆ ಪರಿಹಾರದಲ್ಲಿಯೂ ಅಕ್ರಮ ನಡೆದಿದ್ದು, ಇದರ ತನಿಖೆಯೂ ನಡೆಯಬೇಕು ಎಂದು ಮಾಜಿ ಶಾಸಕ ಶಿವರಾಜ ಸಜ್ಜನರ ಒತ್ತಾಯಿಸಿದ್ದಾರೆ.

ನನ್ನ ಜಮೀನಿನಲ್ಲಾದ ಬೆಳೆ ನಷ್ಟದ ಪರಿಹಾರವನ್ನು ನನಗೆ ಗೊತ್ತಿಲ್ಲದೇ ಯಾರಿಗೋ ವಿತರಣೆಯಾಗಿದೆ. ಈ ಕುರಿತು ತಹಸೀಲ್ದಾರ್ ವಿರುದ್ಧ ಪೊಲೀಸರಿಗೆ ದೂರು ಸಲ್ಲಿಸುತ್ತೇನೆ. ದೇವಗಿರಿ ಗ್ರಾಮದ ಸರ್ವೆ ನಂಬರ್ 71 ಮತ್ತು 72ರಲ್ಲಿ ನನ್ನ ಕೃಷಿ ಜಮೀನ ಮೇಲೆ ಮಹಾದೇವಕ್ಕ ಗಾಣಿಗೇರ, ಶಿವಾನಂದ ಗಾಣಿಗೇರ ಎಂಬವರಿಗೆ ಪರಿಹಾರ ವಿತರಣೆಯಾಗಿದೆ. ಸರ್ವೆ ನಂ.72ರ ಜಮೀನಿಗೆ ಸಂಬಂಧಿಸಿದಂತೆ ಗದಿಗೆವ್ವ ವಾಲಿಕಾರ ಎಂಬವರಿಗೆ ಪರಿಹಾರ ವಿತರಣೆಯಾಗಿರುವ ಮಾಹಿತಿಯಿದೆ. ಇವರ್ಯಾರೂ ನನಗೆ ಪರಿಚಯವಿಲ್ಲ. ಪರಿಹಾರ ಮೊತ್ತ ಬೇರೆಯವರಿಗೆ ಹೇಗೆ ಸಂದಾಯವಾಯಿತು ಎಂಬುದರ ಬಗ್ಗೆ ತನಿಖೆಯಾಗಬೇಕು. ಅದಕ್ಕಾಗಿ ತಹಸೀಲ್ದಾರ್ ವಿರುದ್ಧ ವೈಯಕ್ತಿಕವಾಗಿ ಪೊಲೀಸ್ ದೂರು ಸಲ್ಲಿಸುತ್ತೇನೆ. - ಶಿವರಾಜ ಸಜ್ಜನರ, ಮಾಜಿ ಶಾಸಕ ಹಾವೇರಿ

ಈಗಾಗಲೇ ಬೆಳೆ ಹಾನಿ ಪರಿಹಾರ ವಿತರಣೆಯಲ್ಲಿ ನಡೆದಿರುವ ಲೋಪಗಳ ತನಿಖೆ ಪ್ರಗತಿಯಲ್ಲಿದೆ. ಅನೇಕ ತಪ್ಪುಗಳನ್ನು ಈಗಾಗಲೇ ಕಲೆ ಹಾಕಿದ್ದೇವೆ. ದೇವಗಿರಿ ಗ್ರಾಮದಲ್ಲಿ ನಡೆದಿರುವ ಪ್ರಕರಣ ವಿಶೇಷವಾಗಿದೆ. ಇದರ ಕುರಿತು ಸಮಗ್ರ ಪರಿಶೀಲನೆ ನಡೆಸುತ್ತೇವೆ. - ಎಂ. ಯೋಗೇಶ್ವರ, ಅಪರ ಜಿಲ್ಲಾಧಿಕಾರಿ ಹಾವೇರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net