ಮಾಜಿ ಶಾಸಕ ಕೆಂಪೇಗೌಡ ನಿಧನ

8-pnp 1 K.KEMPEGOWDA
Published on


ಪಾಂಡವಪುರ: ಪಾಂಡವಪುರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಪ್ರತಿನಿಧಿಸಿದ್ದ ಮಾಜಿ ಶಾಸಕ ಕೆ.ಕೆಂಪೇಗೌಡ (96) ಅವರು ವಯೋಸಹಜ ಕಾಯಿಲೆಯಿಂದ ಬುಧವಾರ ತಡರಾತ್ರಿ ನಿಧನರಾದರು.

ವ್ಯವಸಾಯೋತ್ಪನ್ನ ಸಹಕಾರ ಸಂಘದ ನಿರ್ದೇಶಕರಾಗಿ ಚುನಾಯಿತರಾಗುವ ಮೂಲಕ ರಾಜಕೀಯ ಕ್ಷೇತ್ರ ಪ್ರವೇಶಿಸಿದ ಕೆಂಪೇಗೌಡರು, ಆರು ಚುನಾವಣೆಗಳನ್ನು ಎದುರಿಸಿ 3 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1985ರ ಚುನಾವಣೆಯಲ್ಲಿ ಪಕ್ಷೇತರರಾಗಿ ಜೋಡಿ ಪಾರಿವಾಳದ ಗುರುತಿನಲ್ಲಿ ಸ್ಪರ್ಧಿಸಿ ಕಾಂಗ್ರೆಸ್ ಮತ್ತು ಜನತಾ ಪಕ್ಷದ ಧುರೀಣರನ್ನು ಸೋಲಿಸಿ ಎರಡನೇ ಬಾರಿಗೆ ಶಾಸಕರಾಗಿ ಚುನಾಯಿತರಾದರು. ನಂತರ 1989ರಲ್ಲಿ ಕಾಂಗ್ರೆಸ್ಸಿನ ಹಲಗೇಗೌಡ ಹಾಗೂ 1994ರಲ್ಲಿ ರೈತ ಸಂಘದ ನಾಯಕ ಕೆ.ಎಸ್.ಪುಟ್ಟಣ್ಣಯ್ಯ ಅವರ ವಿರುದ್ಧ ಸೋಲು ಕಂಡರು.
ಬಳಿಕ ಕಾಂಗ್ರೆಸ್ ಸೇರ್ಪಡೆಗೊಂಡು 1999ರಲ್ಲಿ ಕೆ.ಎಸ್.ಪುಟ್ಟಣ್ಣಯ್ಯ ಅವರ ವಿರುದ್ಧ ಗೆಲುವು ಸಾಧಿಸಿ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾದರು. 1999ರಲ್ಲಿ ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದಲ್ಲಿ ಸಚಿವರಾಗುವ ಅವಕಾಶ ಇತ್ತಾದರೂ, ಕೊನೆಗಳಿಗೆಯಲ್ಲಿ ಕೈತಪ್ಪಿದ ಹಿನ್ನೆಲೆಯಲ್ಲಿ ಶಾಸಕರಾಗಿಯೇ ಅವಧಿ ಪೂರೈಸಿದರು. 2004ರಲ್ಲಿ ಕಾಂಗ್ರೆಸ್ ಪಕ್ಷ ಎರಡನೇ ಅವಧಿಗೆ ಬಿ ಫಾರಂ ನೀಡಲು ಕೊನೇ ಗಳಿಗೆಯಲ್ಲಿ ನಿರಾಕರಿಸಿದ್ದರಿಂದ ಪಕ್ಷೇತರರಾಗಿ ಸ್ಪರ್ಧಿಸುವ ಹಂಬಲದಿಂದ ನಾಮಪತ್ರ ಸಲ್ಲಿಕೆಯ ಕೊನೆಯ ದಿನ ಬೆಂಗಳೂರಿನಿಂದ ನೇರವಾಗಿ ತಾಲೂಕು ಕಚೇರಿಗೆ ಆಗಮಿಸಿ ತರಾತುರಿಯಲ್ಲಿ ಉಮೇದುವಾರಿಕೆ ಸಲ್ಲಿಸಲು ಮುಂದಾದರು. ಪೂರ್ವ ಸಿದ್ಧತೆ ಇಲ್ಲದೆ ಹಾಗೂ ಪಕ್ಷೇತರ ಅಭ್ಯರ್ಥಿಗೆ ಅಗತ್ಯವಿದ್ದ ಸೂಚಕರು ಮತ್ತು ಅನುಮೋದಕರ ತಕ್ಷಣಕ್ಕೆ ಸಿಗದ ಕಾರಣ ಚುನಾವಣೆಯಲ್ಲಿ ಸ್ಪರ್ಧಿಸಲು ಸಾಧ್ಯವಾಗಲಿಲ್ಲ.

2008ರ ಚುನಾವಣಾ ವೇಳೆಗೆ ಪಾಂಡವಪುರ ವಿಧಾನಸಭಾ ಕ್ಷೇತ್ರ ಮರುವಿಂಗಡಣೆಗೊಂಡು ಮೇಲುಕೋಟೆ ವಿಧಾನಸಭಾ ಕ್ಷೇತ್ರವಾಗಿ ಬದಲಾವಣೆಗೊಂಡಿತ್ತು. ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡಿದ್ದ ಕೆಂಪೇಗೌಡರು ಚುನಾವಣಾ ಕಣಕ್ಕಿಳಿದರಾದರೂ ಠೇವಣಿ ಇಲ್ಲದಂತೆ ಸೋಲುವ ಮೂಲಕ ಸಕ್ರಿಯ ರಾಜಕಾರಣದಿಂದ ದೂರಾದರು.


ಸರಳ ವ್ಯಕ್ತಿತ್ವ: ಸರಳ ಸಜ್ಜನಿಕೆಗೆ ಹೆಸರಾಗಿದ್ದ ಕೆಂಪೇಗೌಡರು ತಾವು ಶಾಸಕರಾಗಿದ್ದಾಗಲೂ ಯಾವುದೇ ವಾಹನ ಖರೀದಿ ಮಾಡಲಿಲ್ಲ. ತಮ್ಮ ಹಿಂಬಾಲಕರು, ಬೆಂಬಲಿಗರು ಮತ್ತು ಪಕ್ಷದ ಕಾರ್ಯಕರ್ತರ ಬೈಕ್‌ಗಳಲ್ಲೇ ಸಂಚರಿಸುತ್ತಿದ್ದರು. ವಿಧಾನಸಭಾ ಕಾರ್ಯ ಕಲಾಪಗಳಲ್ಲಿ ಭಾಗವಹಿಸಲು ಸದನಕ್ಕೆ ತೆರಳಬೇಕಾದರೂ ಬೆಳಗಿನ ಜಾವ ಪಾಂಡವಪುರದಿಂದ ಬೆಂಗಳೂರಿಗೆ ಕೆಎಸ್‌ಆರ್‌ಟಿಸಿ ಬಸ್‌ನಲ್ಲೇ ಪ್ರಯಾಣ ಮಾಡುತ್ತಿದ್ದರು.

ಇವರಿಗೆ ಐವರು ಪುತ್ರಿಯರು, ನಾಲ್ವರು ಪುತ್ರರು ಇದ್ದಾರೆ. ಪತ್ನಿ 1993ರಲ್ಲಿ ನಿಧನರಾಗಿದ್ದರು. ಅಂತ್ಯಸಂಸ್ಕಾರವನ್ನು ಸ್ವಂತ ತೋಟದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಗುರುವಾರ ಮಧ್ಯಾಹ್ನ ನೆರವೇರಿಸಲಾಯಿತು.

ಮಾಜಿ ಸಚಿವ ಜಿ.ಟಿ.ದೇವೇಗೌಡ, ತಿ.ನರಸೀಪುರ ಶಾಸಕ ಅಶ್ವಿನ್‌ಕುಮಾರ್, ರೈತ ನಾಯಕಿ ಸುನೀತಾ ಪುಟ್ಟಣ್ಣಯ್ಯ, ಬಿಜೆಪಿ ಮುಖಂಡ ಡಾ.ಇಂದ್ರೇಶ್, ಜಿಪಂ ಮಾಜಿ ಸದಸ್ಯ ಸಿ.ಅಶೋಕ್, ಚಂದ್ರವನ ಆಶ್ರಮದ ಪೀಠಾಧ್ಯಕ್ಷ ದುರ್ದಂಡೇಶ್ವರ ಮಹಂತ ಶಿವಯೋಗಿ ಸ್ವಾಮೀಜಿ, ರಾಮಯೋಗೀಶ್ವರ ಮಠದ ಶಿವಬಸವ ಸ್ವಾಮೀಜಿ, ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮನಂದ ಸ್ವಾಮೀಜಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net