ಮಾಜಿ ಮೇಯರ್ ನಾರಾಯಣಗೆ ಎಂಎಲ್‌ಸಿ ಸ್ಥಾನ ಕಲ್ಪಿಸಿ

Published on

ಚಾಮರಾಜನಗರ: ಪೌರಕಾರ್ಮಿಕರ ಶ್ರೇಯೋಭಿವೃದ್ಧಿಗಾಗಿ ದುಡಿಯುತ್ತಿರುವ ಮೈಸೂರು ಮಹಾನಗರ ಪಾಲಿಕೆ ಮಾಜಿ ಮೇಯರ್ ನಾರಾಯಣ ಅವರಿಗೆ ವಿಧಾನ ಪರಿಷತ್‌ಗೆ ನೇಮಕ ಮಾಡುವಂತೆ ರಾಜ್ಯ ನಗರಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕರ ಮಹಾಸಂಘದ ಜಿಲ್ಲಾಧ್ಯಕ್ಷ ಸಿ.ಶಂಕರ ಅಂಕನಶೆಟ್ಟಿಪುರ ಒತ್ತಾಯಿಸಿದರು.

ಇದೇ ಜೂನ್ ತಿಂಗಳಲ್ಲಿ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ 7 ಸ್ಥಾನಗಳು ದೊರೆಯಲಿದೆ. ಇದರಲ್ಲಿ ಒಂದು ಸ್ಥಾನವನ್ನು ಪರಿಶಿಷ್ಟ ಜಾತಿಯ ಪೌರಕಾರ್ಮಿಕ ಸಮುದಾಯಕ್ಕೆ ಮೀಸಲು ಇಡಬೇಕು. ಅದರಲ್ಲೂ ಪೌರಕಾರ್ಮಿಕರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಮಾಜಿ ಮೇಯರ್ ನಾರಾಯಣ ಅವರಿಗೆ ಅವಕಾಶವನ್ನು ಕಲ್ಪಿಸಿಕೊಡಬೇಕು ಎಂದು ಶನಿವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ರಾಜ್ಯದಲ್ಲಿ ಪೌರಕಾರ್ಮಿಕರನ್ನು ಸಂಘಟನೆ ಮಾಡುವ ಮೂಲಕ ನಾರಾಯಣ ಅವರು ಅನೇಕ ಹೋರಾಟಗಳನ್ನು ರೂಪಿಸಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೌರಕಾರ್ಮಿಕರನ್ನು ಖಾಯಂ ಮಾಡಿಸುವಲ್ಲಿ ನಾರಾಯಣ ಅವರು ಶ್ರಮಿಸಿದ್ದಾರೆ. ಸುಮಾರು 40 ವರ್ಷಗಳಿಂದ ಪೌರಕಾರ್ಮಿಕರ ಏಳ್ಗೆಗಾಗಿ ದುಡಿಯುತ್ತಿರುವ ನಾರಾಯಣ ಅವರನ್ನು ಕಾಂಗ್ರೆಸ್ ಈ ಬಾರಿ ಎಂಎಲ್‌ಸಿ ಸ್ಥಾನಕ್ಕೆ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಗೋಷ್ಠಿಯಲ್ಲಿ ಪೌರಕಾರ್ಮಿಕರ ಮಹಾಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಂ.ರಾಜೇಂದ್ರ, ದಲಿತ ಮುಖಂಡ ಸಂಘಸೇನಾ, ಮೂಕಹಳ್ಳಿ ಮಲ್ಲೇಶ್, ಆನಂದ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net