

ಚಿತ್ರದುರ್ಗ: ನಗರದ ವಿಪಿ ಬಡಾವಣೆಯಲ್ಲಿರುವ ರಾಷ್ಟ್ರೀಯ ನಾಯಕ,ಮಾಜಿ ಸಿಎಂ ದಿ.ಎಸ್.ನಿಜಲಿಂಗಪ್ಪ ಅವರ ನಿವಾಸವಿನ್ನೂ ಸ್ಮಾರಕ,ವಸ್ತು ಸಂಗ್ರಹಾಲಯವಾಗಿ ಪರಿವರ್ತನೆಯಾಗಲಿದೆ.
ಮನೆಯನ್ನು ಸರ್ಕಾರ ಖರೀದಿಸಿದ ಬಳಿಕ ಮೊದಲ ಬಾರಿಗೆ ಸೋಮವಾರ ಡಿಸಿ ಟಿ.ವೆಂಕಟೇಶ್,ನಿವಾಸಕ್ಕೆ ಭೇಟಿ ನೀಡಿ ನಿಜಲಿಂಗಪ್ಪ ಸ್ಮಾರಕ ಟ್ರಸ್ಟಿ ಕೆಇಬಿ ಷಣ್ಮುಖಪ್ಪರಿಂದ ಮನೆ ಕೀ ಪಡೆದು ಪರಿಶೀಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ಮನೆಯನ್ನು ಸರ್ಕಾರ ಖರೀದಿಸಿ ಸಂರಕ್ಷಿಸಿ ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕೆಂಬ ಬೇಡಿಕೆ ಇತ್ತು.
ಈ ಹಿನ್ನೆಲೆಯಲ್ಲಿ ಕಳೆದ ವಾರ ಸರ್ಕಾರ ನಿವಾಸವನ್ನು ಖರೀದಿಸಿದೆ. ಇದರ ಪುನರುಜ್ಜೀವನ ಉದ್ದೇಶದಿಂದ ಮನೆಗೆ ಭೇಟಿ ನೀಡಿ ಕಟ್ಟ ಡದ ಸ್ಥಿತಿಗತಿ ಪರಿಶೀಲಿಸಿದ್ದೇನೆ. ಸ್ಮಾರಕವನ್ನಾಗಿ ಅಭಿವೃದ್ಧಿ ಪಡಿಸಬೇಕಿದೆ. ಈ ನಿಟ್ಟಿನಲ್ಲಿ ಇಂಜಿನಿಯರ್‌ಗಳೊಂದಿಗೆ ಚರ್ಚಿಸಲಾಗುವುದು. ಮೊದಲನೇಯದಾಗಿ ಸಿವಿಲ್ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು.
ಸರ್ಕಾರದೊಂದಿಗೆ ಚರ್ಚಿಸಿ ಮುಂದಿನ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು. ಸ್ಮಾರಕವನ್ನಾಗಿ ಪರಿವರ್ತಿಸಲು ಅಗತ್ಯ ಎಸ್ಟಿಮೆಟ್ ಗೆ ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ. ತಕ್ಷಣದಿಂದಲೇ ದುರಸ್ಥಿ ಆರಂಭವಾಗಲಿದೆ. ಲೋಕೋಪಯೋ ಗಿ ಇಲಾಖೆ ಅಂದಾಜಿಸಿರುವಂತೆ 4.18 ಕೋಟಿ ರೂ.ವೆಚ್ಚದಲ್ಲಿ ನಿಜಲಿಂಗಪ್ಪರ ವಾರಸುದಾರರಿಂದ ಮನೆ ಖರೀದಿಸಲಾಗಿದೆ. 80 ಲಕ್ಷ ರೂ.ಅನುದಾನವಿದೆ. ಇದರಲ್ಲಿ ಸಿವಿಲ್ ಕಾಮಗಾರಿಗಳನ್ನು ನಿರ್ವಹಿಸಲಾಗುವುದು. ಹೆಚ್ಚಿನ ಅನುದಾನದ ಅಗತ್ಯವಿದ್ದರೆ ಸರ್ಕಾರಕ್ಕೆ ಮ ನವಿ ಮಾಡಲಾಗುವುದು.
ಇಲ್ಲಿ ನಿಜಲಿಂಗಪ್ಪ ಅವರಿಗೆ ಸಂಬಂಧಿಸಿದ ಛಾಯಾಚಿತ್ರಗಳು,ಉಡುಗೊರೆಗಳು ಮತ್ತಿತರ ಗೃಹೋಪಯೋಗಿ ವಸ್ತುಗಳಿವೆ. ಅವುಗಳ ನ್ನು ಯಥಾವತ್ತಾಗಿ ಪ್ರಾಚ್ಯವಸ್ತು ಸಂಗ್ರಹಾಲಯ ಇಲಾಖೆ ಸಹಯೋಗದೊಂದಿಗೆ ಸಂರಕ್ಷಿಸಲಾಗುವುದು. ಸ್ಮಾರಕ ಹಾಗೂ ವಸ್ತುಸಂಗ್ರಹಾ ಲಯವನ್ನಾಗಿ ಪರಿವರ್ತಿಸಿ,ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು. ಎಡಿಸಿ ಜಿಲ್ಲಾಧಿಕಾರಿ ಬಿ.ಟಿ.ಕು ಮಾರಸ್ವಾಮಿ, ಪ್ರಕಾಶ್ ಇತರರು ಇದ್ದರು.
ಸಂಗ್ರಹಾಲಯದಲ್ಲಿ ಇರಲಿ
ಮಾಜಿ ಸಿಎಂ ಎಸ್. ನಿಜಲಿಂಗಪ್ಪ ಅವರ ಜೀವನ ಚರಿತ್ರೆ, ಅವರ ಆದರ್ಶ ಜೀವನ ಕುರಿತಂತೆ ಮುಂದಿನ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ರೀತಿಯಲ್ಲಿ ಜಿಲ್ಲಾಡಳಿತ ಎಸ್‌ಎನ್. ನಿವಾಸವನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸಬೇಕು ಎಂದು ನಿಜಲಿಂಗಪ್ಪ ಸ್ಮಾರಕ ಟ್ರಸ್ಟಿ ಕೆಇಬಿ ಷಣ್ಮುಖಪ್ಪ ಹೇಳಿದರು.
ನಿಜಲಿಂಗಪ್ಪ ಅವರ ಮನೆಯ ಕೀಯನ್ನು ಜಿಲ್ಲಾಧಿಕಾರಿ ವೆಂಕಟೇಶ್ ಅವರಿಗೆ ಹಸ್ತಾಂತರಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.
ಬಿ.ಎಸ್.ಯೂಡಿಯೂರಪ್ಪ ಸಿಎಂ ಆಗಿದ್ದಾಗ 2009ರಲ್ಲಿ ಈ ಮನೆಯನ್ನು ವಸ್ತು ಸಂಗ್ರಹಾಲಯವನ್ನಾಗಿ ಪರಿವರ್ತಿಸಲಾಗಿತ್ತು. ಆದರೆ, 2012-13ರಲ್ಲಿ ಅದರಲ್ಲಿದ್ದ ಅನೇಕ ವಸ್ತುಗಳು ಕಳವಾಗಿದ್ದವು. ಪೊಲೀಸರ ಪತ್ತೆ ಕಾರ್ಯದ ಬಳಿಕ ಅರ್ಧ ಕೆಜಿ ಬೆಳ್ಳಿ ಮತ್ತಿತರ ಕೆಲ ವಸ್ತಗಳು ದೊರಕಿದವು ಎಂದು ತಿಳಿಸಿದರು.
ವಸ್ತು ಸಂಗ್ರಹಾಲಯ ಉದ್ಘಾಟನೆಯಾದ ವೇಳೆ ಯಾವೆಲ್ಲ ವಸ್ತುಗಳಿದ್ದವು, ಅವೆಲ್ಲವನ್ನೂ ಇದೀಗ ಈಗ ಅಭಿವೃದ್ಧಿಪಡಿಸುವ ಸ್ಮಾರಕ, ವಸ್ತು ಸಂಗ್ರಹಾಲಯದಲ್ಲಿ ಇರುವಂತೆ ಸರ್ಕಾರ ನೋಡಿಕೊಳ್ಳಬೇಕು ಎಂದರು.
ನಿಜಲಿಂಗಪ್ಪ ಅವರ ಪುತ್ರ ಕಿರಣ ಶಂಕರ್ ಹಾಗೂ ಸ್ಮಾರಕ ಟ್ರಸ್ಟ್‌ನ ಟ್ರಸ್ಟಿಗಳ ಸಲಹೆಯೊಂದಿಗೆ ಉತ್ತಮ ಸ್ಮಾರಕವನ್ನಾಗಿ ರೂಪಿಸಬೇಕಿದೆ ಎಂದು ಷಣ್ಮುಖಪ್ಪ ಹೇಳಿದರು.