ಮಾಜಿ ಉಪಮೇಯರ್ ಗೋಪಾಲ ಘಟಕಾಂಬಳೆ ಆರೋಪ, ಯೋಗ್ಯತೆ ಆಧರಿಸಿ ಮಂತ್ರಿ ಸ್ಥಾನ ನೀಡುತ್ತಾರೆ, ಶಾಸಕ ಯತ್ನಾಳ ಲಾಯಕಿ ಮನುಷ್ಯಾ ಅಲ್ಲ

20210802_104956
Published on

ವಿಜಯಪುರ: ನಗರದ ಅಭಿವೃದ್ಧಿ ಕುಂಠಿತವಾಗಿದೆ. ಸಾಕಷ್ಟು ಜನರು ತೊಂದರೆಯಲ್ಲಿದ್ದಾರೆ. ಶಾಸಕರು ಜನರ ಸಮಸ್ಯೆಗೆ ಸ್ಪಂದಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಿಜೆಪಿ ಎಸ್ ಸಿ‌ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಿರುದ್ದ ಚಾಟಿ ಬೀಸಿದರು.

ಯತ್ನಾಳರು ಕೇವಲ ಮಂತ್ರಿಯಾಗಬೇಕು, ಮುಖ್ಯಮಂತ್ರಿ ಯಾಗಬೇಕೆಂಬ ಹುಮ್ಮಸ್ಸಿನಲ್ಲಿ ನಗರದ ಅಭಿವೃದ್ಧಿ ಮರೆತಿದ್ದಾರೆ. ಹೀಗಾಗಿ ನಗರದ ಅಭಿವೃದ್ದಿಗಾಗಿ ಆದಷ್ಟು ಬೇಗ ಪಾಲಿಕೆಯ ಚುನಾವಣೆ ನಡೆಸಬೇಕು. ತಮ್ಮ ಬೆಂಬಲಿಗರ ಮೂಲಕ ಶಾಸಕರೇ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಮೂಲಕ ಚುನಾವಣೆ ನಡೆಯದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಆರೋಪ ಇದೆ. ತಮ್ಮ ರಾಜಕೀಯ ಹಿತಾಸಕ್ತಿಗಾಗಿ ಇಡೀ ನಗರದ ಅಭಿವೃದ್ಧಿ ಹಾಳು ಮಾಡುವುದು ಎಷ್ಟರ ಮಟ್ಟಿಗೆ ಸರಿ? ಎಂದು ಗೋಪಾಲ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ನಗರದ ಅಭಿವೃದ್ಧಿ ದೃಷ್ಟಿಯಿಂದ ಬೇಗ ಪಾಲಿಕೆ ಚುನಾವಣೆ ನಡೆಸಬೇಕು. ನಗರದಲ್ಲಿ ಭ್ರಷ್ಟಾಚಾರ ಮಾಡಲೆಂದೇ ಚುನಾವಣೆ ಮುಂದೂಡಲಾಗುತ್ತಿದೆ. ಕಮೀಷನ್ ಒಬ್ಬರೇ ಹೊಡೆಯಲು ಈ ರೀತಿ ಮಾಡುತ್ತಿದ್ದಾರೆ. ಮನಸ್ಸಿಗೆ ಬಂದಂತೆ ಗಾಡಿ ಹೊಡೆಯುತ್ತಿದ್ದಾರೆ. ಬಸನಗೌಡ ಪಾಟೀಲ ಯತ್ನಾಳ ಪಕ್ಷ ಹಾಳು ಮಾಡುತ್ತಿದ್ದಾರೆ‌. ಇವರು ಲಾಯಕಿ ಶಾಸಕ ಅಲ್ಲ ಎಂಬುದು ಪಕ್ಷದ ಹಿರಿಯರಿಗೆ ಗೊತ್ತಿದೆ‌. ನಾವೆಲ್ಲ ಅವರ ಗಮನಕ್ಕೆ ತಂದಿದ್ದೇವೆ‌. ಆದಷ್ಟು ಬೇಗ ಕ್ರಮ ಆಗುತ್ತೆ ಎನ್ನುವ ಭರವಸೆ ಇದೆ ಎಂದರು.

ರಾಜ್ಯ ನಾಯಕರು, ಕೇಂದ್ರ ನಾಯಕರು, ಸಂಘದ ವರಿಷ್ಠರು, ಮಠಾಧೀಶರನ್ನೂ ಬಯ್ಯುವ ಈ ಶಾಸಕರು ಲಾಯಕಿ‌ ಮನುಷ್ಯ ಅಲ್ಲ ಎಂದರು.

ಈ‌ ಮನುಷ್ಯ ಲಾಯಕಿ ಇದ್ದರೆ ಇವರನ್ನೇ ಸಿಎಂ ಮಾಡುತ್ತಿದ್ದರು. ಇವರು ಯೋಗ್ಯವೋ ಅಯೋಗ್ಯರೋ ಎಂಬುದು ಪಕ್ಷದ ವರಿಷ್ಠರಿಗೆ ಗೊತ್ತಿದೆ. ಅದಕ್ಕಾಗಿಯೇ ಸೂಕ್ತ ಮುಖ್ಯಮಂತ್ರಿ ಯನ್ನಾಗಿ ಮಾಡಿದ್ದಾರೆ ಎಂದರು.

ಬಿಜೆಪಿಗೆ ದಲಿತರ ಬಲ:

ಸಂವಿಧಾನ ತಿದ್ದುಪಡಿ ಮಾಡುತ್ತಾರೆ, ಬಿಜೆಪಿ ದಲಿತರ ವಿರೋಧಿ ಎಂಬ ಕಾಂಗ್ರೆಸ್ ಆರೋಪ ಸುಳ್ಳು ಎಂಬುದನ್ನು ಮೋದಿ‌ ಸರ್ಕಾರ ಸಾಧಿಸಿ ತೋರಿಸಿದೆ. ಅಂಬೇಡ್ಕರ್ ಅವರ ಪಂಚಕರ್ಮ ಭೂಮಿ ಅಭಿವೃದ್ಧಿ ಪಡಿಸುತ್ತಿರುವುದು ಮೋದಿ ಸರ್ಕಾರ, ಅಂಬೇಡ್ಕರ್ ಭವನ ನಿರ್ಮಾಣ ಮೋದಿ‌ ಸರ್ಕಾರಕ್ಕೆ ಸಲ್ಲಬೇಕು ಎಂದರು.

ಕರೊನಾ ನಿರ್ವಹಣೆ:

ಎಸ್ ಸಿ ಮೋರ್ಚಾದ ರಾಜ್ಯಾಧ್ಯಕ್ಷ

ಚಲವಾದಿ ನಾರಾಯಣಸ್ವಾಮಿ ಕರೊನಾ ಸಂದರ್ಭದಲ್ಲಿ ರಾಜ್ಯಾದ್ಯಂತ ಅಡ್ಡಾಡಿ ಜನರ ನೆರವಿಗೆ ಧಾವಿಸಿದ್ದಾರೆ. ಬಿಜೆಪಿ ಎಸ್ ಸಿ ಮೋರ್ಚಾ ಸಾಕಷ್ಟು ಜನಪರ ಕಾರ್ಯ ಮಾಡಿದೆ. ಹೀಗಾಗಿ ದಲಿತರು ಬಿಜೆಪಿಗೆ ಬೆನ್ನೆಲುವಾಗಿ ನಿಂತಿದ್ದಾರೆ ಎಂದರು.

ಕರೊನಾ ನಿಯಂತ್ರಣಕ್ಕೆ ತರುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶ್ರಮಿಸಿದೆ. ಮೃತರ ಕುಟುಂಬಸ್ಥರಿಹೆ ಸಹಾಯ ಧನ ನೀಡಿದ್ದಾರೆ. ರಾಜ್ಯ ಸರ್ಕಾರ ಲಕ್ಷ ರೂ. ಪರಿಹಾರ ನೀಡಿದೆ. ದಲಿತರಿಗಾಗಿ ಭೂ ಒಡೆತನದ ಯೋಜನೆಯಡಿ ಸಾಕಷ್ಟು ದಲಿತರಿಗೆ ಭೂಮಿ ಕೊಡಿಸುವಲ್ಲಿ ಬಿಜೆಪಿ ಸಫಲವಾಗಿದೆ ಎಂದರು.

ಬಿಜೆಪಿ‌ ಎಸ್ ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ ಕಂದಗಲ್ಲ ಇದ್ದರು‌.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net