

ಬೇಲೂರು: 12ನೇ ಶತಮಾನದ ಬಸವಣ್ಣನವರ ಸಮಕಾಲೀನ ಶರಣರಲ್ಲಿ ಮಡಿವಾಳ ಮಾಚಿದೇವರು ಒಬ್ಬರಾಗಿದ್ದು, ಅವರ ಸೇವೆ ಮಹತ್ತರದ್ದು ಎಂದು ಶಾಸಕ ಕೆ.ಎಸ್. ಲಿಂಗೇಶ್ ಹೇಳಿದರು.
ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಪಟ್ಟಣದ ತಾಲೂಕು ಕಚೇರಿಯಲ್ಲಿ ಆಯೋಜಿಸಿದ್ದ ಮಡಿವಾಳ ಮಾಚಿದೇವರ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು.
ಮಡಿವಾಳ ಮಾಚಿದೇವರು ಬಸವಣ್ಣನವರ ಹೆಗಲಿಗೆ ಹೆಗಲು ಕೊಟ್ಟವರು. ಎಲ್ಲರಿಗೂ ಸಮಾನ ಹಕ್ಕು ನೀಡಬೇಕು, ಎಲ್ಲರೂ ಒಂದೇ ಎಂಬ ಭಾವನೆ ಕಾಣಬೇಕು ಎಂದು ಬಯಸಿದ್ದ ಅವರು ಕಾಯಕ ನಿಷ್ಠೆ, ದಾಸೋಹದಂತಹ ಮೌಲ್ಯಯುತವಾದ ಕಾಣಿಕೆ ನೀಡಿದ್ದಾರೆ. ಇಂತಹ ಶರಣರು ಮಹಾ ಪುರುಷರು ಹಾಕಿಕೊಟ್ಟ ಮಾರ್ಗದರ್ಶನ ಹಾಗೂ ಸಂದೇಶವನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.
ಸಮಾಜದಲ್ಲಿ ಜಾತಿ ಮುಖ್ಯವಲ್ಲ ಜೀವನ ಮುಖ್ಯ ಎಂದು ತೋರಿಸಿ ಕೊಟ್ಟಿದ್ದಾರೆ. ದೇಶ ಆರ್ಥಿಕವಾಗಿ ಪ್ರಗತಿ ಹೊಂದಬೇಕದಾರೆ ನಾವು ಮೊದಲು ಶಿಕ್ಷಣ ಕೊಡಿಸಬೇಕಾಗಿದೆ. ಈ ಸಮಾಜದ ಅಭಿವೃದ್ಧಿಗೆ ಈಗಾಗಲೇ ಒಂದು ಕೋಟಿ ರೂ.ಅನುದಾನ ನೀಡಿದ್ದು, 10 ಸಮಾಜಕ್ಕೆ ನಿವೇಶನ ಕೂಡ ಕೊಟ್ಟಿದ್ದೇನೆ. ಅದರಲ್ಲಿ ಈಗಾಗಲೇ 6 ಸಮಾಜಕ್ಕೆ 1 ಕೋಟಿ ರೂ.ನಂತೆ ಅನುದಾನ ಕೊಡಿಸಲಾಗಿದೆ. ಯಾವ ಜಯಂತಿ ಕಾರ್ಯಕ್ರಮಕ್ಕೂ ಇಷ್ಟು ಜನ ಸೇರಿದ್ದು ನೋಡಿರಲಿಲ್ಲ ಎಂದರು.
ತಹಸೀಲ್ದಾರ್ ರಮೇಶ್ ಮಾತನಾಡಿ, ಮಡಿವಾಳ ಮಾಚಿದೇವರು ಶ್ರೇಷ್ಠ ವಚನಕಾರರು. ಅವರು ವಚನಗಳ ಮೂಲಕ ಹಿಂದುಳಿದವರು ಹಾಗೂ ಮಹಿಳೆಯರು ಮುಖ್ಯವಾಹಿನಿಗೆ ಬರುವಂತೆ ಉತ್ತೇಜಿಸಿದರು. ಸಮಾಜದಲ್ಲಿ ತುಳಿತಕ್ಕೊಳಗಾದವರ ನೋವುಗಳನ್ನು ವಚನಗಳಲ್ಲಿ ಬಿಚ್ಚಿಟ್ಟರು. ಆ ಮೂಲಕ 12ನೇ ಶತಮಾನದಲ್ಲಿ ಮಹಾನ್ ಸಮಾಜ ಸುಧಾರಕರಾಗಿ ಹೊರಹೊಮ್ಮಿದರು. ಅವರ ವಚನಗಳ ಆಶಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದರು.
ಮಡಿವಾಳ ಸಂಘದ ತಾಲೂಕು ಅಧ್ಯಕ್ಷ ಎಸ್. ನಾಗೇಶ್ ಮಾತನಾಡಿ, ಈಗಾಗಲೇ ನಮ್ಮ ಸಮುದಾಯಕ್ಕೆ ಶಾಸಕರು 1 ಕೋಟಿ ರೂ. ಅನುದಾನ ನೀಡಿದ್ದು, ಇವರ ಸಹಕಾರವೂ ಅತಿಮುಖ್ಯವಾಗಿದೆ. ನಮ್ಮ ಜನಾಂಗದವರು ರಾಜಕೀಯ, ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದು, ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ನಮ್ಮ ಸಮುದಾಯದವರು ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಬೇಕಿದೆ ಎಂದರು.
ಪುರಸಭೆ ಅಧ್ಯಕ್ಷ ದಾನಿ, ಮಾಜಿ ಅಧ್ಯಕ್ಷ ಚಂದ್ರಶೇಖರ್, ಎಪಿಎಂಸಿ ಮಾಜಿ ಅಧ್ಯಕ್ಷ ಅದ್ದೂರಿ ಕುಮಾರ್, ಪುರಸಭೆ ಸದಸ್ಯ ಶಾಂತಕುಮಾರ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷ ನಾಗೇಶ್ ಯಾದವ್, ಕ್ಷೇತ್ರ ಸಮನ್ವಯಾಧಿಕಾರಿ ಶಿವಮರಿಯಪ್ಪ, ಇಸಿಒ ಶಿವಪ್ಪ ಇತರರಿದ್ದರು.