ಮಾಚಾಪುರದಲ್ಲಿ ಕಬ್ಬು ನಾಶಪಡಿಸಿದ ಗಜಪಡೆ

02-kalaghatagi 3a
Published on

ಕಲಘಟಗಿ: ತಾಲೂಕಿನ ಬೀರವಳ್ಳಿ ಗ್ರಾಮದಲ್ಲಿ ಬುಧವಾರ ಪ್ರತ್ಯಕ್ಷವಾಗಿದ್ದ ಆರು ಆನೆಗಳ ಹಿಂಡು ಗುರುವಾರ ಮಾಚಾಪುರ ಗ್ರಾಮದ ಸಮೀಪ ಹೊಲವೊಂದಕ್ಕೆ ನುಗ್ಗಿ ಕಬ್ಬು ಬೆಳೆಯನ್ನು ನಾಶಪಡಿಸಿವೆ.

ಬಸವಣ್ಣಯ್ಯ ಹೊನ್ನಳ್ಳಿ ಅವರ ಕಬ್ಬಿನ ಹೊಲಕ್ಕೆ ನುಗ್ಗಿದ ಆನೆಗಳು, ಅಂದಾಜು 1 ಎಕರೆಯಷ್ಟು ಕಬ್ಬು ಬೆಳೆಯನ್ನು ನಾಶಪಡಿಸಿವೆ. ಇದರಿಂದಾಗಿ ಸುತ್ತಲಿನ ಗ್ರಾಮಗಳ ರೈತರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.

ಬುಧವಾರ ಬೆಳಗ್ಗೆ ಬೀರವಳ್ಳಿ ಗ್ರಾಮದ ಜಮೀನುಗಳಿಗೆ ಆನೆಗಳು ಲಗ್ಗೆ ಇಟ್ಟಿದ್ದವು. ಇವೇ ಆನೆಗಳು ಮಾಚಾಪುರ ಗ್ರಾಮದ ಜಮೀನುಗಳಿಗೆ ನುಗ್ಗಿವೆ. ಗಜಪಡೆ ಸ್ಥಳ ಬಿಟ್ಟು ಕದಲದೇ ಇದ್ದಾಗ ಗ್ರಾಮಸ್ಥರು ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ವಲಯ ಅರಣ್ಯಾಧಿಕಾರಿ ಶ್ರೀಕಾಂತ ಪಾಟೀಲ ನೇತೃತ್ವದ ಸಿಬ್ಬಂದಿ ಸಂಜೆ ವೇಳೆಗೆ ಬೇಡ್ತಿ ಹಳ್ಳದ ಮಾರ್ಗವಾಗಿ ಜಿನ್ನೂರು, ಸಿಂಗನಹಳ್ಳಿಯತ್ತ ಆನೆಗಳನ್ನು ಓಡಿಸಿದ್ದಾರೆ. ಡ್ರೋನ್ ಮೂಲಕ ಆನೆಗಳ ಚಲನವಲನ ಮೇಲೆ ನಿಗಾ ವಹಿಸಿದ್ದಾರೆ. ಜತೆಗೆ ರಾತ್ರಿಯಿಡೀ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲಾಗುತ್ತಿದೆ.

ಕಾರ್ಯಾಚರಣೆಯಲ್ಲಿ ಕಲಘಟಗಿ ಉಪವಲಯ ಅರಣ್ಯಾಧಿಕಾರಿಗಳಾದ ಎಂ.ವೈ. ಚಲವಾದಿ, ಆರ್.ಜೆ. ಕಡೆಮನಿ, ಅರಣ್ಯ ರಕ್ಷಕರಾದ ಉಮೇಶ ಕಡಿ, ಮಹಾಂತೇಶ ತೇಲಿ ಇತರರು ಇದ್ದರು.

ಸದ್ಯ ಆನೆಗಳ ಮಾರ್ಗವನ್ನು ಬದಲಿಸಲಾಗಿದೆ. ರಾತ್ರಿ ಕಾರ್ಯಾಚರಣೆ ನಡೆಸಿ ಕಾಡಿಗೆ ಅಟ್ಟಲಾಗುವುದು. ಕಬ್ಬು ನಾಶವಾಗಿದ್ದರ ಕುರಿತು ರೈತರು ಮಾಹಿತಿ ನೀಡಬೇಕು. ಹಾನಿ ವರದಿಯನ್ನು ಸರ್ಕಾರಕ್ಕೆ ಕಳುಹಿಸಿ ಪರಿಹಾರ ನೀಡುವಂತೆ ಕೋರಲಾಗುವುದು. | ಶ್ರೀಕಾಂತ ಪಾಟೀಲ, ಕಲಘಟಗಿ ವಲಯ ಅರಣ್ಯಾಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net