ಮಾಗಿ ಉಳುಮೆಗೆ ಮುಂದಾಗದ ರೈತ! : ಅತಿವೃಷ್ಟಿ, ಬೆಲೆ ಕುಸಿತ, ದುಬಾರಿ ವೆಚ್ಚದಿಂದ ಕಂಗಾಲು, ಬೇಸಾಯದಿಂದ ವಿಮುಖನಾಗುತ್ತಿರುವ ಕೃಷಿಕ

2
Published on

ಕಾರಂಗುಟ್ಟೆ ನಾರಾಯಣಸ್ವಾಮಿ ಕೋಲಾರ

ಜಿಲ್ಲೆಯಲ್ಲಿ ಪೂರ್ವ ಮುಂಗಾರು ಮಳೆ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಸುರಿದಿದೆ. ಆದರೆ ಬೆಳೆ ಇಡಲು ಪೂರ್ವ ತಯಾರಿ ಮಾಡಿಕೊಳ್ಳಬೇಕಾದ ರೈತ ಮಾತ್ರ ಮೌನ ತಾಳಿದ್ದಾನೆ. ಯುಗಾದಿ ನಂತರ ರೇವತಿ, ಅಶ್ವಿನಿ, ಭರಣಿ, ಕೃತ್ತಿಕಾ ಮಳೆ ನಕ್ಷತ್ರಗಳಲ್ಲಿ ಮಳೆ ಬಂದರೆ ಹೊನ್ನೇರು (ಉಳುಮೆಗೆ ಮುನ್ನ ಮಾಡುವ ಪೂಜೆ) ಕಟ್ಟಿ ಉಳುಮೆಗೆ ಮುಂದಾಗುತ್ತಿದ್ದ ರೈತ ಅತಿವೃಷ್ಟಿಯಿಂದಾಗಿ ನಷ್ಟ, ರಾಗಿಗೆ ಸಿಗದ ಬೆಲೆ, ರಸಗೊಬ್ಬರ ದರ ಏರಿಕೆಯಿಂದ ಕಂಗಾಲಾಗಿದ್ದಾನೆ. ಇದರಿಂದಾಗಿ ಬೆಳೆ ಇಡುವುದಕ್ಕೂ ಮುನ್ನ ಮಾಡಬೇಕಾದ ಉಳುಮೆಯಿಂದ ದೂರ ಸರಿದಿದ್ದಾನೆ. ಕಳೆದ ವರ್ಷ ಅಕ್ಟೋಬರ್​, ನವೆಂಬರ್​ನಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾದ್ದರಿಂದ ಕಟಾವಿಗೆ ಬಂದಿದ್ದ ರಾಗಿ ಮಣ್ಣುಪಾಲಾಗಿತ್ತು. ಕೈಗೆ ಸಿಕ್ಕಿದ್ದ ರಾಗಿ ಮಾರೋಣ ಎಂದರೆ ಕೇಂದ್ರ, ರಾಜ್ಯ ಸರ್ಕಾರದ ಹಠಮಾರಿ ಧೋರಣೆಯಿಂದ ಇದುವರೆಗೆ ಬೆಂಬಲ ಬೆಲೆಗೆ ರಾಗಿ ಮಾರಲು ತಿಣುಕುವಂತಾಗಿದೆ.

ರಸಗೊಬ್ಬರ, ಡೀಸೆಲ್​ ಬೆಲೆ ಗಗನಮುಖಿಯಾಗಿದೆ. ಬೇಸಾಯ ದುಬಾರಿಯಾಗುತ್ತಿದೆ ಎಂಬ ನಿಲುವು ರೈತರದ್ದಾಗಿದೆ. ಇಂಥ ಹತ್ತು ಹಲವು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿರುವ ಜಿಲ್ಲೆಯ ಅನ್ನದಾತ ರಾಗಿ ಹಾಗೂ ಇತರ ಬೆಳೆಗಳನ್ನು ಖುಷ್ಕಿಯಲ್ಲಿ ಬೆಳೆಯಲು ಮೀನಮೇಷ ಎಣಿಸುತ್ತಿದ್ದಾನೆ.

ಜುಲೈ ಕೊನೆವರೆಗೂ ಅವಕಾಶ: ರಾಗಿ ಬಿತ್ತನೆಗೆ ಜುಲೈ ಅಂತ್ಯದವರೆಗೆ ಕಾಲಾವಕಾಶವಿದೆ ಎಂದು ಕೃಷಿ ಅಧಿಕಾರಿಗಳು ಹೇಳುತ್ತಿದ್ದಾರೆ. ನೆಲಗಡಲೆ, ತೊಗರಿ, ಅಲಸಂದೆ, ಎಳ್ಳು ಸೇರಿ ವಿವಿಧ ಬೆಳೆಗಳನ್ನಿಡಲು ಮತ್ತು ರಾಗಿ ಬಿತ್ತನೆಗೆ ಮಾಗಿ ಉಳುಮೆಯಲ್ಲಿ ಭೂಮಿ ಸಿದ್ಧತೆ ಮಾಡಿಕೊಳ್ಳಬೇಕಾದ ಕೃಷಿಕರು, ಬೆಳೆ ಮಾಡಿ ನಷ್ಟ ಅನುಭವಿಸುವುದಕ್ಕಿಂತ ಸುಮ್ಮನಿರುವುದೇ ಲೇಸೆಂದು ಭಾವಿಸಿದಂತಿದೆ. ಪ್ರಸ್ತುತ ಊರಿಗೊಬ್ಬರೂ ಉಳುಮೆಗೆ ಮುಂದಾಗಿಲ್ಲದಿರುವುದೇ ಇದಕ್ಕೆ ನಿದರ್ಶನ.

ಮಳೆ ತಂದೊಡ್ಡಿದ ಸಂಕಷ್ಟ: ಜಿಲ್ಲೆಯಲ್ಲಿ ಅಕ್ಟೋಬರ್​ನಲ್ಲಿ ಸಾಧಾರಣವಾಗಿ 136 ಮಿಮೀ ಮಳೆ ಆಗುತ್ತದೆ. ಆದರೆ ಕಳೆದ ವರ್ಷ 237 ಮಿಮೀ ಮಳೆಯಾಗಿತ್ತು. ನವೆಂಬರ್​ನಲ್ಲಿ 20ರ ತನಕ 50 ಮಿಮೀ ವಾಡಿಕೆಯ ಬದಲು 246 ಮಿಮೀ ಮಳೆಯಾಗಿತ್ತು. ಇದರಿಂದಾಗಿ 64,567 ಹೆಕ್ಟೇರ್​ನಲ್ಲಿ ಬೆಳೆಯಲಾಗಿದ್ದ ರಾಗಿ ಬೆಳೆಯ ಪೈಕಿ 47,105 ಹೆಕ್ಟೇರ್​ ಬೆಳೆ ಹಾನಿಯಾಗಿತ್ತು. ಕೇಂದ್ರ ಸರ್ಕಾರ ಹಲವು ಷರತ್ತುಗಳನ್ನು ವಿಧಿಸಿದ್ದರಿಂದ ಬೆಂಬಲ ಬೆಲೆಗೆ ರಾಗಿ ಮಾರಾಟ ಮಾಡಲೂ ಇದುವರೆಗೂ ಸಾಧ್ಯವಾಗಿಲ್ಲ. ಕಳೆದ ವರ್ಷ 8,860 ಹೆಕ್ಟೇರ್​ನಲ್ಲಿ ನೆಲಗಡಲೆ ಬೆಳೆದಿದ್ದು, ಅದರಲ್ಲಿ 46 ಹೆಕ್ಟೇರ್​ನಷ್ಟು ಬೆಳೆ ಹಾನಿಯಾಗಿತ್ತು. ಆದರೆ ನೆಲಗಡಲೆ ವಾತಾವರಣ ವೈಪರೀತ್ಯಕ್ಕೆ ಸಿಲುಕಿ ಇಳುವರಿ ಕುಂಟಿತವಾಗಿ ಜೊಳ್ಳು ಹೆಚ್ಚಾಗಿದ್ದು, ನಷ್ಟಕ್ಕೆ ಕಾರಣವಾಗಿತ್ತು.

ಉಳುಮೆ ದುಬಾರಿ: ಎತ್ತು ಕಟ್ಟಿ ಉಳುಮೆ ಮಾಡಲು ದಿನಕ್ಕೆ 1,500 ರೂ. ಕೂಲಿ ಕೊಡಬೇಕು. ಟ್ರಾ$್ಯಕ್ಟರ್​ನಲ್ಲಿ ಉಳುಮೆ ಮಾಡಲು ಎಕರೆಗೆ 1,200 ರೂ. ಕೊಡಬೇಕು. 3 ತಿಂಗಳ ಹಿಂದೆ 900 ರೂ.ಇದ್ದ ಎಂಒಪಿ ರಸಗೊಬ್ಬರ 1,700 ರೂ.ಗೆ ಏರಿಕೆಯಾಗಿದೆ. ಡಿಎಪಿ (ಖಾಸಗಿ ಸಂಸ್ಥೆಗಳದ್ದು) 1,350 ರೂ. ಇದ್ದರೂ 1,500 ರೂ.ಗೂ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ. ಕಾಂಪ್ಲೆಕ್ಸ್​ ಗೊಬ್ಬರ 1,500 ರೂ.ಗೆ ಏರಿಕೆಯಾಗಿದೆ. ಇದರ ನಡುವೆ ಜಿಲ್ಲೆಯಲ್ಲಿ ನಕಲಿ ರಸಗೊಬ್ಬರವೂ ಪತ್ತೆಯಾಗಿದೆ. ಇದೆಲ್ಲದರ ಪರಿಣಾಮ ರಾಗಿ, ನೆಲಗಡಲೆ ಬೆಳೆ ಮಾಡಲು ನಿರಾಸಕ್ತಿ ಮೂಡುವಂತೆ ಮಾಡಿದೆ.

94,761 ಹೆಕ್ಟೇರ್​ ಹಂಗಾಮು ಗುರಿ: ಪ್ರಸಕ್ತ ಸಾಲಿಗೆ ಜಿಲ್ಲೆಯಲ್ಲಿ 61,200 ಹೆಕ್ಟೇರ್​ನಲ್ಲಿ ರಾಗಿ, 15,140 ಹೆಕ್ಟೇರ್​ನಲ್ಲಿ ತೊಗರಿ, ಉರುಳಿ, ಅಲಸಂದೆ, 10,340 ಹೆಕ್ಟೇರ್​ನಲ್ಲಿ ನೆಲಗಡಲೆ ಸೇರಿ ಒಟ್ಟು 94,761 ಹೆಕ್ಟೇರ್​ನಲ್ಲಿ ಮುಂಗಾರು ಹಂಗಾಮು ಗುರಿಯನ್ನು ಕೃಷಿ ಇಲಾಖೆ ಹೊಂದಿದೆ. ಅಗತ್ಯದಷ್ಟು ಗೊಬ್ಬರ ದಾಸ್ತಾನು ಇದ್ದು, ಏಪ್ರಿಲ್​ನಿಂದ ಸೆಪ್ಟೆಂಬರ್​ವರೆಗೆ 39.604 ಮೆಟ್ರಿಕ್​ ಟನ್​ ರಸಗೊಬ್ಬರ ದಾಸ್ತಾನಿಗೆ ಬೇಡಿಕೆ ಸಲ್ಲಿಸಲಾಗಿದೆ. ಆಯಾ ತಿಂಗಳಿಗೆ ತಕ್ಕಂತೆ ಗೊಬ್ಬರ ಸರಬರಾಜಾಗುತ್ತಿದ್ದು, ರೈತರಿಗೆ ಸಮಸ್ಯೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಕೈಷಿ ಇಲಾಖೆ ಜಂಟಿ ನಿರ್ದೇಶಕಿ ರೂಪಾದೇವಿ ತಿಳಿಸಿದ್ದಾರೆ.

ರೈತರು ಇತ್ತೀಚೆಗೆ ಟ್ರಾ$್ಯಕ್ಟರ್​ಗಳಲ್ಲಿ ಹೆಚ್ಚಾಗಿ ಉಳುಮೆ ಮಾಡುತ್ತಿದ್ದಾರೆ. ಖುಷ್ಕಿಯಲ್ಲಿ ರಾಗಿ ಬಿತ್ತನೆಗೆ ಕಾಲಾವಕಾಶವಿದೆ. ಮಾಗಿ ಉಳುಮೆ ಮಾಡುವುದರಿಂದ ಭೂಮಿಯಲ್ಲಿನ ಹುಳ, ಕೀಟಗಳ ಮೊಟ್ಟೆ ಮತ್ತು ಮರಿಗಳು ಮೇಲೆ ಬಂದು ನಾಶವಾಗುತ್ತವೆ. ಮಳೆ ಬಂದಾಗ ನೀರು ಹರಿದುಹೋಗದಂತೆ ಮಣ್ಣು ಹಿಡಿದಿಟ್ಟುಕೊಳ್ಳುತ್ತದೆ. ತಿಪ್ಪೆಗೊಬ್ಬರ ಹಾಕಿ ಮೊದಲೇ ಉಳುಮೆ ಮಾಡಿದರೆ ಫಸಲು ಚೆನ್ನಾಗಿ ಬರುತ್ತದೆ. ಹೀಗಾಗಿ ಮಾಗಿ ಉಳುಮೆಗೆ ಮುಂದಾಗಬೇಕು. ರೂಪಾದೇವಿ, ಜಂಟಿ ನಿರ್ದೇಶಕಿ, ಕೈಷಿ ಇಲಾಖೆ --------------------------- ಕೈಷಿಯಲ್ಲಿ ಸತತ 2 ವರ್ಷದಿಂದ ನಷ್ಟ ಅನುಭವಿಸುತ್ತಿದ್ದೇವೆ. ಖುಷ್ಕಿಯಲ್ಲಿ ರಾಗಿ ಬೆಳೆಯಲು ಹೋಗಿ ಸಾಲಗಾರರಾಗಿದ್ದೇವೆ. ರಾಗಿ ಮಾರಿದರೆ ತೆನೆ ಕಟಾವು ಮಾಡಿಸಿದ ಕೂಲಿಯೂ ಬರುವುದಿಲ್ಲ. ಕ್ವಿಂಟಾಲ್​ ರಾಗಿಯನ್ನು ಈಗಲೂ 1,500ರೂ.ಗೆ ವ್ಯಾಪಾರಸ್ಥರು ಕೇಳುತ್ತಿದ್ದಾರೆ. ಎಲ್ಲ ರೈತರಿಗೆ ಬೆಂಬಲ ಬೆಲೆಗೆ ರಾಗಿ ಮಾರಲು ಅವಕಾಶ ಸಿಗಲಿಲ್ಲ. ಎಕರೆ ರಾಗಿ ಹೊಲ ಮಾಡಿಸಲು 30 ಸಾವಿರ ರೂ. ಖರ್ಚು ಬರುತ್ತದೆ. ಹಾಕಿದ ಬಂಡವಾಳದಲ್ಲಿ ಶೇ.50 ಕೂಡ ವಾಪಸ್​ ಬರುತ್ತಿಲ್ಲ. ಹೀಗಾಗಿ ಬೇಸಾಯ ಮಾಡುವುದಕ್ಕಿಂತ ಕೊಂಡು ತಿನ್ನುವುದೇ ಲೇಸು ಎನಿಸಿದೆ. ಕೆ.ಎಚ್​. ರಮೇಶ್​, ರೈತ, ಕದಿರೇನಹಳ್ಳಿ, ಟೇಕಲ್​ ಹೋಬಳಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net