

ಚಿತ್ರದುರ್ಗ: ಜಿಲ್ಲೆಯಲ್ಲಿ 59 ವರ್ಷ ಸುರಿದ ಮಳೆಯ ಸರಾಸರಿ ಗಮನಿಸಿದರೆ, 35 ವರ್ಷಕ್ಕೂ ಅಧಿಕ ಕಾಲ ಬರ ಕಂಡಿದ್ದೇವೆ. ಹೀಗಾಗಿ ಮಧ್ಯ ಕರ್ನಾಟಕ ಭಾಗದ ಒಣವಲಯವೆಂದೇ ಗುರುತಿಸಿಕೊಂಡಿದೆ. ನೀರಿನ ಕೊರತೆ ಎದುರಿಸುತ್ತಿರುವ ಕಾರಣ ಮಾಗಿ ಉಳುಮೆಗೆ ರೈತರು ಹೆಚ್ಚು ಒಲವು ತೋರಬೇಕಿದೆ ಎಂದು ಕೃಷಿ ಇಲಾಖೆ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್ ವಿಶ್ಲೇಷಿಸಿದ್ದಾರೆ.
ನಂ. 1 ಕನ್ನಡ ದಿನಪತ್ರಿಕೆ ‘ವಿಜಯವಾಣಿ’ ಚಿತ್ರದುರ್ಗದ ಕಚೇರಿಯಲ್ಲಿ ಗುರುವಾರ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳೊಂದಿಗೆ ಏರ್ಪಡಿಸಿದ್ದ ವಿ-ಸಂವಾದದಲ್ಲಿ ಬರ ಎದುರಿಸುವ ಕುರಿತು ಅನಿಸಿಕೆ ಹಂಚಿಕೊಂಡರು.
ಕೋಟೆನಾಡಿನಲ್ಲಿ ಸಾಮಾನ್ಯವಾಗಿ ಜೂನ್, ಜುಲೈ, ಆಗಸ್ಟ್, ಸೆಪ್ಟೆಂಬರ್ ತಿಂಗಳಲ್ಲಿ ಅಸಮರ್ಪಕ ಮಳೆಯಾಗುತ್ತಿದೆ. ವಾರ್ಷಿಕ ಶೇ. 35 ರಷ್ಟು ಮಳೆ ಕೊರತೆ ಎದುರಿಸುತ್ತ ಬಂದಿದೆ. ಒಣ ಹವೆಯಿಂದ ಕೂಡಿದೆ. ಸಮಯಕ್ಕೆ ಸರಿಯಾಗಿ ಮಳೆಯಾಗದ ಕಾರಣ ಬೆಳೆಗಳ ಇಳುವರಿಯಲ್ಲೂ ಸಮಸ್ಯೆ ಅನುಭವಿಸಲಾಗುತ್ತಿದೆ. ಆದ್ದರಿಂದ ಜಾಗರೂಕತೆಯಿಂದ ಕೃಷಿ ಮತ್ತು ತೋಟಗಾರಿಕೆ ಚಟುವಟಿಕೆಯಲ್ಲಿ ತೊಡಗಬೇಕಿದೆ ಎನ್ನುತ್ತಾರೆ ಅವರು.