

ಬಾಗಲಕೋಟೆ: ವಿವಿಕೆ ಫೌಂಡೇಷನ್ ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ಮಾ.೯ ರಿಂದ ೧೨ ರ ವರೆಗೆ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಬಾಗಲಕೋಟೆ ನಾರಿ ಶಕ್ತಿ ಸಮಾವೇಶ ಹಾಗೂ ಸಾಧಕಿಯರಿಗೆ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫೌಂಡೇಷನ್ ಸಂಸ್ಥಾಪಕ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಮಾವೇಶದ ಮೂಲಕ ಆಯಾ ತಾಲೂಕಿನಲ್ಲಿ ಸಾಮಾಜಿಕ, ಶೈಕ್ಷಣಿಕ, ರಂಗಭೂಮಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯನ್ನು ಸತ್ಕರಿಸಲಾಗುತ್ತದೆ, ಜತೆಗೆ ಮಹಿಳೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಸಹ ಜರುಗಲಿದೆ ಎಂದು ತಿಳಿಸಿದರು.
ಮಾ.೯ ರಂದು ಬೆಳಗ್ಗೆ ೧೦ ಗಂಟೆಗೆ ಇಳಕಲ್ಲದ ವಿಜಯಮಹಾಂತೇಶ ಮಠದ ಆವರಣ, ಸಂಜೆ ೫ಕ್ಕೆ ಬನಹಟ್ಟಿಯ ಈಶ್ವರ ಲಿಂಗ ಮೈದಾನ, ಮಾ.೧೦ ರಂದು ಸಂಜೆ ೪ಕ್ಕೆ ಬಾಗಲಕೋಟೆಯ ಕಲಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ, ಉಳಿದ ಕಾರ್ಯಕ್ರಮಗಳ ಬಗ್ಗೆ ನಂತರದಲ್ಲಿ ತಿಳಿಸಲಾಗುತ್ತದೆ ಎಂದು ತಿಳಿಸಿದರು.
ಈ ಕಾರ್ಯಕ್ರಮಕ್ಕೆ ಚಲನಚಿತ್ರ ನಟಿ ಪ್ರೇಮಾ, ನಟ ಡಾಲಿ ಧನಂಜಯ ಸೇರಿದಂತೆ ಅನೇಕರು ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ನಾಲ್ಕು ದಿನ ಕಾರ್ಯಕ್ರಮದಲ್ಲಿ ಅವರು ಯಾವ ದಿನ ಬರುತ್ತಾರೋ ಅಂದು ನಮ್ಮ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ. ಜತೆಗೆ ಕಾಮಿಡಿ ಕಿಲಾಡಿ ಕಲಾವಿದರು, ವಿವಿಧ ಗಾಯಕರು ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದು, ಜಿಲ್ಲೆಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.