ಮಾ.ಹನುಮಂತೇಗೌಡರಿಗೆ ಅಂತಿಮ ನಮನ

ಮಾ.ಹನುಮಂತೇಗೌಡರಿಗೆ ಅಂತಿಮ ನಮನ
Published on

ಹಾಸನ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಾ.ಹನುಮಂತೇಗೌಡ ಅವರಿಗೆ ನಗರದ ಕಸಾಪ ಆವರಣದಲ್ಲಿ ಸೋಮವಾರ ಅಂತಿಮ ನಮನ ಸಲ್ಲಿಸಲಾಯಿತು. ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆ ಕಾರ್ಯಕರ್ತರು ಹಾಗೂ ನಾಗರಿಕರು ಹನುಮಂತೇಗೌಡರ ಪಾರ್ಥಿವ ಶರೀರರಕ್ಕೆ ಗೌರವ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಡಾ.ಎಚ್.ಎಲ್. ಮಲ್ಲೇಶಗೌಡ ಮಾತನಾಡಿ, ನಗರದಲ್ಲಿ ಕನ್ನಡ ಸಾಹಿತ್ಯ ಭವನಕ್ಕೆ ನಿವೇಶನ ಮಂಜೂರು ಮಾಡಿಸುವಲ್ಲಿ ಮಾ.ಹನುಮಂತೇಗೌಡ ಅವರ ಪಾತ್ರ ಮುಖ್ಯವಾಗಿದೆ. ಮಾ.ಹನುಮಂತೇಗೌಡರು ಪರಿಷತ್ತಿನಲ್ಲಿ 1989 ರಿಂದ 1995ರವರೆಗೆ ಅಧ್ಯಕ್ಷರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಎಚ್.ಬಿ.ಜ್ವಾಲನಯ್ಯ ಅವರ ಅಧ್ಯಕ್ಷತೆಯಲ್ಲಿ ಗೌರವ ಕಾರ್ಯದರ್ಶಿಗಳಾಗಿ ಪರಿಷತ್ತಿಗೆ ನಗರದ ಹೃದಯ ಭಾಗದಲ್ಲಿ ನಿವೇಶನ ಮಂಜೂರಾತಿಯಲ್ಲಿ ಮುಂಚೂಣಿಯಲ್ಲಿ ನಿಂತು ಕೆಲಸ ಮಾಡಿ ಪರಿಷತ್ ಭವನ ನಿರ್ಮಾಣಕ್ಕೆ ತಮ್ಮದೆಯಾದ ಕೊಡುಗೆ ನೀಡಿದ್ದಾರೆ ಎಂದು ಸ್ಮರಿಸಿದರು.
ಕನ್ನಡ ಭಾಷೆ ಬೆಳವಣಿಗೆಗೆ ಸಂಘಟನೆ ಮುಖ್ಯವೆಂದು ಹನುಮಂತೇಗೌಡರು ಪ್ರತಿಪಾದಿಸುತ್ತಿದ್ದರು. ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಸಕ್ರಿಯವಾಗುವಂತೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು. ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಹೇಳಿದರು.
ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಮಾತನಾಡಿ, ಪರಿಷತ್ತಿಗೆ ಮಾ.ಹನುಮಂತೇಗೌಡರ ಸೇವೆಯನ್ನು ಸ್ಮರಿಸುವಂತಹದ್ದು, ಅವರು ಶಿಕ್ಷಕರಾಗಿ ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಸೇವೆ ನಮ್ಮೆಲ್ಲರಿಗೂ ಪ್ರೇರಣೆಯಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಅನಂತರಾಮು, ಮರ್ಕುಲಿ ಗೌಡಪ್ಪ, ಬೋರೇಗೌಡ, ತಾರಾ ಜ.ಹೊ.ನಾರಾಯಣಸ್ವಾಮಿ, ಸಾಹಿತಿ ಎನ್.ಎಲ್.ಚನ್ನೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ, ಬಿ.ಆರ್.ಬೊಮ್ಮೇಗೌಡ, ಕೋಶಾಧ್ಯಕ್ಷ ಬಿ.ಎನ್. ಜಯರಾಮು, ತಾಲೂಕು ಅಧ್ಯಕ್ಷ ಮಮತೇಶ್, ಸಂಘಟನಾ ಕಾರ್ಯದರ್ಶಿಗಳಾದ ಆರ್.ಬಿ.ಶಂಕರ್, ಎಚ್.ಬಿ.ಚಂದ್ರಶೇಖರ್, ಕಸಾಪ ಮಾಜಿ ಅಧ್ಯಕ್ಷರಾದ ನಾಯಕರಹಳ್ಳಿ ಮಂಜೇಗೌಡ, ರವಿ ನಾಕಲಗೂಡು, ಕಸಾಪ ಪದಾಧಿಕಾರಿಗಳು ಹಾಗೂ ಕನ್ನಡಪರ ಒಕ್ಕೂಟದ ಮುಖಂಡರು ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net