ಮಾ.8 ರಂದು ಕಾರ್ಖಾನೆಗಳಿಗೆ ರೈತರ ಮುತ್ತಿಗೆ

f0ab8edc-37be-459f-8578-e1895524baa3
Published on

ಮೈಸೂರು; ಭೂಮಿ ಕಳೆದುಕೊಂಡ ರೈತರಿಗೆ ಉದ್ಯೋಗ ನೀಡದೆ ವಂಚಿಸಿರುವ ಕಾರ್ಖಾನೆಗಳ ವಿರುದ್ಧ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದು, ಮಾ.8ರಂದು ನಾಲ್ಕು ಕಾರ್ಖಾನೆಗಳಿಗೆ ರೈತರು ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲು ಮುಂದಾಗಿದ್ದಾರೆ.


ನಂಜನಗೂಡು ತಾಂಡ್ಯ ಕೈಗಾರಿಕಾ ಪ್ರದೇಶದಲ್ಲಿರುವ ಮೆ. ಸ್ಪಾರ್ಕ್ ಮಿಂಡಾ, ರುಚಾ ಇಂಜಿನಿಯರಿಂಗ್, ಪಾರ್ಲೆ ಆಗ್ರೋ ಮತ್ತು ಯುಬಿ ಕಾರ್ಖಾನೆಗಳ ಎದುರು ಫೆ.20ರಿಂದ ರೈತ ಕುಟುಂಬದವರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಆದರೆ, ಬೇಡಿಕೆ ಈಡೇರಿಸುತ್ತಿಲ್ಲ. ಆದ್ದರಿಂದ ಈ ಕಾರ್ಖಾನೆಗಳನ್ನು ಬಂದ್ ಮಾಡಿಸಿ ಆಡಳಿತ ಮಂಡಳಿಗಳಿಗೆ ಬಿಸಿ ಮುಟ್ಟಿಸಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ಕಾರ್ಖಾನೆಗಾಗಿ ಭೂಮಿ ನೀಡಿರುವ ರೈತರ ಮಕ್ಕಳಿಗೆ ಕಾಯಂ ಕೆಲಸ ನೀಡಿಲ್ಲ. ಮೆ.ಸ್ಪಾರ್ಕ್ ಮಿಂಡಾ 22, ರುಚಾ ಇಂಜಿನಿಯರಿಂಗ್ 4, ಪಾರ್ಲೆ ಆಗ್ರೋ 30, ಯುಬಿ ಕಾರ್ಖಾನೆ 8 ಜನರಿಗೆ ಇನ್ನೂ ಉದ್ಯೋಗ ನೀಡಿಲ್ಲ. ಕುಂಟು ನೆಪ ಹೇಳಿ ಉದ್ಯೋಗ ನೀಡುವುದನ್ನು ನಿರಾಕರಿಸಲಾಗಿದೆ. ಇದರಿಂದ ಭೂಮಿ ಕಳೆದ ರೈತರು ಬೀದಿಗೆ ಬಿದ್ದಿದ್ದಾರೆ. ಇತ್ತ ತಾವು ಉತ್ತಿ ಬಿತ್ತಿ ಬೆಳೆಯುತ್ತಿದ್ದ ಭೂಮಿಯೂ ಇಲ್ಲ, ಇತ್ತ ಕೆಲಸವೂ ಇಲ್ಲದ ತ್ರಿಶಂಕು ಸ್ಥಿತಿಗೆ ತಲುಪಿದ್ದಾರೆ ಎಂದು ಹೇಳಿದರು.


ಕಾಯ್ದೆ ಪ್ರಕಾರ ಭೂಮಿ ಕಳೆದಕೊಂಡ ರೈತರ ಕುಟುಂಬದ ಒಬ್ಬರಿಗೆ ಆಯಾ ಕಾರ್ಖಾನೆಯಲ್ಲಿ ಉದ್ಯೋಗ ನೀಡಬೇಕು. ಆದರೆ, ಇದು ಪಾಲನೆಯಾಗುತ್ತಿಲ್ಲ. ನೆಪ ಹೇಳಿ ರೈತರನ್ನು ಅಲೆಸಲಾಗುತ್ತಿದೆ. ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಸಹ ಸ್ಪಂದನೆ ಮಾಡುತ್ತಿಲ್ಲ. ಜನಪ್ರತಿನಿಧಿಗಳು ವಿಷಯ ಗೊತ್ತಿದ್ದರೂ ಏನು ಮಾಡುತ್ತಿಲ್ಲ. ಇದರಿಂದ ರೈತರು ಅಸಹಾಯಕರಾಗಿದ್ದಾರೆ. ಹೀಗಾಗಿ, ವಿವಿಧ ಸಂಘಟನೆ ಸಹಕಾರದೊಂದಿಗೆ ಕಾರ್ಖಾನೆಗಳಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಸಿದರು.


ಕೈಗಾರಿಕೆಗಾಗಿ ಜಿಲ್ಲೆಯಲ್ಲಿ ಬಹಳಷ್ಟು ರೈತರ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಆದರೆ, ಇನ್ನೂ ಶೇ.70ರಷ್ಟು ಸ್ವಾಧೀನ ಭೂಮಿ ಬಳಕೆಯಾಗದೆ ಪಾಳುಬಿದ್ದಿದೆ. ಆದರೆ, ಮತ್ತೆ ಇನ್ನಷ್ಟು ಭೂಮಿಯನ್ನು ಸ್ವಾಧೀನ ಕ್ರಮ ವಹಿಸಲಾಗಿದೆ. ಆದ್ದರಿಂದ ಜಿಲ್ಲೆಯಲ್ಲಿ ಸ್ವಾಧೀನಪಡಿಸಿಕೊಂಡ ಭೂಮಿ ಎಷ್ಟು, ಅದರಲ್ಲಿ ಎಷ್ಟು ಬಳಕೆಯಾಗಿದೆ, ಎಷ್ಟು ಖಾಲಿ ಇದೆ, ಎಷ್ಟು ರೈತರಿಗೆ ಉದ್ಯೋಗ ನೀಡಲಾಗಿದೆ ಎಂಬ ಮಾಹಿತಿಯೊಂದಿಗೆ ಶ್ವೇತಪತ್ರವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಸರೋಜಿನಿ ಮಹಿಷಿ ವರದಿ ಪ್ರಕಾರ ಜಿಲ್ಲೆಯ ಕಾರ್ಖಾನೆಗಳಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡಿಲ್ಲ. ಅನ್ಯ ರಾಜ್ಯದವರು ಹೆಚ್ಚಿನ ಪ್ರಮಾಣದಲ್ಲಿ ಕೆಲಸಕ್ಕೆ ಸೇರಿಸಿಕೊಂಡು ಕನ್ನಡಿಗರಿಗೆ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.


ಸರ್ವೋದಯ ಕರ್ನಾಟಕದ ಮುಖಂಡ ಉಗ್ರನರಸಿಂಹೇಗೌಡ, ಎಐಯುಟಿಯುಸಿ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರ್ ಮೇಟಿ, ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಬೊಕ್ಕಹಳ್ಳಿ ನಂಜುಂಡಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net