ಮಾ.7ರಿಂದ ಜಿಪಂ ಎದುರು ಅನಿರ್ದಿಷ್ಟಾವಧಿ ಹೋರಾಟ; ಸಿಎಂಗೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಪತ್ರ

WEB KIMMMANE
Published on

ತೀರ್ಥಹಳ್ಳಿ: ಗ್ರಾಮ ಪಂಚಾಯಿತಿ ಚುನಾಯಿತ ಸದಸ್ಯರ ಮೇಲೆ ಅಧಿಕಾರಿ ನಡೆಸಿದ ಹಲ್ಲೆ ಮತ್ತು ಬಿಜೆಪಿ ಬೆಂಬಲಿತ ಗೂಂಡಾಗಳಿಂದ ನಡೆಯುವ ಕ್ರಿಮಿನಲ್ ವರ್ತನೆಗಳ ವಿರುದ್ಧ ಇಲಾಖಾ ಮೇಲಧಿಕಾರಿಗಳು ಹಾಗೂ ಪೊಲೀಸರಿಗೆ ನೀಡಿರುವ ದೂರಿಗೆ ಸಂಬಂಧಿಸಿ ಕ್ರಮ ಕೈಗೊಳ್ಳದಿರುವುದನ್ನು ವಿರೋಧಿಸಿ ಮಾ.7ರಿಂದ ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ತಾಲೂಕಿನ ಮೇಲಿನಕುರುವಳ್ಳಿ ಗ್ರಾಪಂ ಸಾಮಾನ್ಯ ಸಭೆಯಲ್ಲಿ ಗೃಹ ಸಚಿವರ ಮತ್ತು ಬಿಜೆಪಿ ಕಾರ್ಯಕರ್ತರ ಬೆಂಬಲದಿಂದ ಗ್ರಾಪಂ ಪಿಡಿಒ ಮೇಲಧಿಕಾರಿಗಳ ಸಮ್ಮುಖದಲ್ಲೇ ಹಲ್ಲೆ ನಡೆಸಿದ್ದಾರೆ. ಈ ಅಧಿಕಾರಿಯ ವಿರುದ್ಧ ಸಾರ್ವಜನಿಕ ಪ್ರತಿಭಟನೆ ನಡೆದಿರುವುದಲ್ಲದೆ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರೂ ಸರ್ಕಾರ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ತನಿಖೆ ನಡೆಸಿ ಈ ಪಿಡಿಒ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಸಿಎಂಗೆ ಪತ್ರ ಬರೆದಿರುವುದಾಗಿ ತಿಳಿಸಿದರು.

ಇದಕ್ಕು ಮೊದಲು ಕೋಣಂದೂರು ಗ್ರಾಪಂನಲ್ಲಿ ಕಾಂಗ್ರೆಸ್ ಬೆಂಬಲಿತ ಓರ್ವ ಮಹಿಳಾ ಸಮಸ್ಯೆ ಮತ್ತು ಇನ್ನೊಬ್ಬ ಸದಸ್ಯರ ಮೇಲೆ ಬಿಜೆಪಿ ಬೆಂಬಲಿತ ಸದಸ್ಯರು ಹಲ್ಲೆ ನಡೆಸಿದ್ದರು. ಸಿಸಿ ಕ್ಯಾಮರಾ ೂಟೇಜ್ ದಾಖಲೆಗಳ ಸಹಿತ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನೇಗಿಲೋಣಿ ಮತ್ತು ನೊಣಬೂರಿನಲ್ಲಿ ನಡೆದ ಶೂಟ್‌ಔಟ್ ಪ್ರಕರಣ, ನೊಣಬೂರು ಪಂಚಾಯಿತಿಯಲ್ಲಿ ನಡೆದ ಮೂಡ್ಲಿ ಹಲ್ಲೆ ಹಾಗೂ ಗುಡ್ಡೇಕೊಪ್ಪ ಗ್ರಾಪಂ ವ್ಯಾಪ್ತಿಯ ಅಗಸಾಡಿ ಕೊಲೆ ಪ್ರಕರಣ ಹೀಗೆ ಹಲವಾರು ಘಟನೆಗಳಲ್ಲಿ ಅಪರಾಧಿಗಳಾಗಿರುವ ಬಿಜೆಪಿ ಕಾರ್ಯಕರ್ತರನ್ನು ಬಿಟ್ಟು ಕೆಲವು ಪ್ರಕರಣಗಳಲ್ಲಿ ನಿರಪರಾಧಿ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರು ದಾಖಲಿಸಲಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಹಾಗಾಗಿ ಮಾರ್ಚ್ 7ರಂದು ಶಿವಮೊಗ್ಗ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳ ಕಚೇರಿ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net