

ಮೈಸೂರು: ಸಮಾಜದ ಕಟ್ಟಕಡೆಯ ವ್ಯಕ್ತಿಯಿಂದಿಡಿದು ಸರ್ಕಾರದ ವಿವಿಧ ಯೋಜನೆಗಳ ಫಲ ಉಂಡಿರುವ ‘ಫಲಾನುಭವಿಗಳ ಸಮ್ಮೇಳನ’ವನ್ನು ಮಾ.4ರಂದು ನಗರದಲ್ಲಿ ಆಯೋಜಿಸಲಾಗುತ್ತಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಹೇಳಿದರು.
ಜಿಲ್ಲಾಡಳಿತ ಭವನದ ವಿಡಿಯೋ ಕಾನ್ಫರೆನ್ಸ್ ಹಾಲ್‌ನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ರಾಜ್ಯದಲ್ಲೇ ಮೊದಲ ಬಾರಿಗೆ ಮೈಸೂರಿನಲ್ಲಿ ಫಲಾನುಭವಿಗಳ ಉತ್ಸವ ಕಾರ್ಯಕ್ರಮವನ್ನು ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದು, 25ರಿಂದ 30 ಸಾವಿರ ವಿವಿಧ ಯೋಜನೆಗಳ ಫಲಾನುಭವಿಗಳು ಭಾಗವಹಿಸಲಿದ್ದಾರೆ. ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಇಲಾಖೆಗಳಿಗೆ ಸಂಬಂಧಿಸಿದ ಫಲಾನುಭವಿಗಳನ್ನು ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲೆಯ ವಿಧಾನಸಭಾ ಹಾಗೂ ವಿಧಾನ ಪರಿಷತ್ ಸದಸ್ಯರು ಹಾಗೂ ಜನಪ್ರತಿನಿಧಿಗಳು ಭಾಗವಹಿಸುವುದರೊಂದಿಗೆ ಮತ್ತಷ್ಟು ಫಲಾನುಭವಿಗಳಿಗೆ ಸವಲತ್ತು ವಿತರಿಸಲಿದ್ದಾರೆ. ಕಳೆದ 4 ವರ್ಷಗಳಿಂದ ಸರ್ಕಾರದ ವಿವಿಧ ಯೋಜನೆ ಹಾಗೂ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಾಗಿರುವವರ ಫೋಟೋ ಹಾಗೂ ಅವರ ಅನಿಸಿಕೆ ಮತ್ತು ವಿವಿಧ ಇಲಾಖೆಗಳ ಯೋಜನೆಗಳನ್ನು ಫ್ಲೆಕ್ಸ್‌ಗಳಲ್ಲಿ ಬರೆಯಿಸಿ ಪ್ರದರ್ಶಿಸಬೇಕು ಎಂದು ನಿರ್ದೇಶಿಸಿದರು.
ವಿವಿಧ ಯೋಜನೆಗಳಾದ ಪಿಂಚಣಿ ಯೋಜನೆಗಳು, ಗೃಹಭಾಗ್ಯ, ಸ್ತ್ರೀಶಕ್ತಿ ಸಂಘಗಳಿಗೆ ಸಹಾಯ, ಆಯುಷ್ಮಾನ್ ಕಾರ್ಡ್, ಆರೋಗ್ಯ ಇಲಾಖೆ ಸೇವೆಗಳು, ಕೃಷಿ, ತೋಟಗಾರಿಕೆ ಸೇರಿದಂತೆ ಎಲ್ಲ ಇಲಾಖೆಗಳ ಜಿಲ್ಲಾ, ತಾಲೂಕು ಅಧಿಕಾರಿಗಳು ಫಲಾನುಭವಿಗಳನ್ನು ಸಮ್ಮೇಳನಕ್ಕೆ ಕರೆ ತರಲು ಶ್ರಮಿಸಬೇಕು ಎಂದು ತಿಳಿಸಿದರು.
ಜಿಪಂ ಸಿಇಒ ಕೆ.ಎಂ.ಗಾಯತ್ರಿ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್ ರೆಡ್ಡಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.