

ಹಗರಿಬೊಮ್ಮನಹಳ್ಳಿ: ಪಟ್ಟಣದ ಹರ ದೇಗುಲದ ಪಂಚಮಸಾಲಿ ಸಮುದಾಯ ಭವನದಲ್ಲಿ ಮಾ.3ರಂದು ವೀರಶೈವ ಸಮುದಾಯದ ಉಚಿತ ಸಾಮೂಹಿಕ ವಿವಾಹ ಮಹೋತ್ಸವ ಹಮ್ಮಿಕೊಳ್ಳಲಾಗಿದೆ ಎಂದು ಪಂಚಮಸಾಲಿ ಸಮಾಜದ ರಾಜ್ಯ ಘಟಕದ ಮಾಜಿ ಗೌರವಾಧ್ಯಕ್ಷ ಬಾವಿ ಬೆಟ್ಟಪ್ಪ ತಿಳಿಸಿದರು.
ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಭಿತ್ತಿಪತ್ರ ಬಿಡುಗಡೆ ಮಾಡಿ ಭಾನುವಾರ ಮಾತನಾಡಿದರು. ವೀರಶೈವ ಲಿಂಗಾಯತ ಸಮುದಾಯದವರು ಹೆಸರು ನೋಂದಾಯಿಸಿಕೊಳ್ಳಬೇಕು ಎಂದು ತಿಳಿಸಿದರು.
ಸಮಾಜದ ತಾಲೂಕು ಅಧ್ಯಕ್ಷ ಅಕ್ಕಿ ಶಿವಕುಮಾರ್ ಮಾತನಾಡಿ, ಬಡವರಿಗೆ ಆರ್ಥಿಕ ಹೊರೆ ಆಗಬಾರದು ಎಂಬ ಕಾರಣಕ್ಕೆ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸಮಾಜದಿಂದ ಅನೇಕ ವರ್ಷಗಳಿಂದ ಆಯೋಜಿಸಲಾಗುತ್ತಿದೆ. ಮದುವೆಗೆ ಒಂದು ದಿನ ಮುಂಚಿತವಾಗಿ ಬಂದು ಉಳಿದುಕೊಳ್ಳಲು ವಧು-ವರ ಮತ್ತು ಅವರ ಕುಟುಂಬದವರಿಗೆ ವಸತಿ, ಊಟ ಮತ್ತು ಉಪಹಾರದ ವ್ಯವಸ್ಥೆ ಮಾಡಲಾಗುತ್ತದೆ ಎಂದರು.
ಬಟ್ಟೆ, ಬಾಸಿಂಗ, ಬಂಗಾರದ ತಾಳಿ, ಬೆಳ್ಳಿ ಕಾಲುಂಗುರ, ಕಡಗ ನೀಡಲಾಗುವುದು. ವರನಿಗೆ 21ವರ್ಷ ಹಾಗೂ ವಧುವಿಗೆ 18 ವರ್ಷ ತುಂಬಿರಬೇಕು. ಯಾವುದೇ ಕಾರಣಕ್ಕೂ ಎರಡನೇ ಮದುವೆಗೆ ಅವಕಾಶ ಇರುವುದಿಲ್ಲ. ಪಂಚಮಸಾಲಿ ಸಮಾಜದ ಹರಿಹರ ಪೀಠಾಧೀಶ್ವರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ನೋಂದಣಿಗೆ ಫೆ.25 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ. 9663989842, 9945903670 ಸಂಪರ್ಕಿಸಬೇಕೆಂದು ಅಕ್ಕಿ ಶಿವಕುಮಾರ್ ತಿಳಿಸಿದರು.
ತಾಲೂಕು ಪ್ರಧಾನ ಕಾರ್ಯದರ್ಶಿ ರವೀಂದ್ರ ಬಾವಿ, ಪ್ರಮುಖರಾದ ವೈ.ಮಲ್ಲಿಕಾರ್ಜುನ, ಬಿ.ಮಂಜುನಾಥ್ ಗೌಡ, ಶಿವಶಂಕರಗೌಡ, ಸಂಚಿ ಶಿವಕುಮಾರ್, ಫೋಟೋ ವೀರೇಶ್, ವಿಶ್ವನಾಥ್ ಇಂಜಿನಿಯರ್, ಗುರುಬಸವರಾಜ್ ಹೊಸಕೇರಿ ಇತರರಿದ್ದರು.