ಮಾ.3 ರಿಂದ ಪೋಲಿಯೋ ಹನಿ ಹಾಕುವ ಕಾರ್ಯ ಆರಂಭ

Polio Honey, Ind., Pulse Polio Campaign, Archana Kulkarni, World Health Organization,
ಇಂಡಿ ಪಟ್ಟಣದ ಆರೋಗ್ಯ ಇಲಾಖೆ ಆವರಣದಲ್ಲಿ ಪೋಲಿಯೋ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಅರ್ಚನಾ ಕುಲಕರ್ಣಿ, ಸುನಂದಾ ಅಂಬಲಗಿ ಇತರರಿದ್ದರು.
Published on

ಇಂಡಿ: ಪಲ್ಸ್ ಪೋಲಿಯೋ ಅಭಿಯಾನವನ್ನು ಈ ವರ್ಷ ಪುನರಾರಂಭಿಸಲಾಗುತ್ತಿದ್ದು, ತಾಲೂಕಿನಲ್ಲಿ ಮಾ.3 ರಿಂದ 4 ದಿನಗಳ ಕಾಲ ನಡೆಯಲಿದೆ. 5 ವರ್ಷದೊಳಗಿನ 61,629ಕ್ಕೂ ಹೆಚ್ಚು ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಗುರಿ ಹೊಂದಲಾಗಿದೆ ಎಂದು ತಾಲೂಕು ಆರೋಗ್ಯ ಅಧಿಕಾರಿ ಅರ್ಚನಾ ಕುಲಕರ್ಣಿ ಹೇಳಿದರು.

ತಾಲೂಕಿನ ವಿವಿಧೆಡೆ ಪಲ್ಸ್ ಪೋಲಿಯೋ ಕಾರ್ಯಕ್ರಮದ ಸಾಮಗ್ರಿ ಕಳುಹಿಸುವ ಹಾಗೂ ಪ್ರಚಾರ ಕಾರ್ಯಕ್ಕೆ ಶುಕ್ರವಾರ ಚಾಲನೆ ನೀಡಿ ಅವರು ಮಾತನಾಡಿದರು.

ನಿರಂತರವಾಗಿ ಪೋಲಿಯೋ ಲಸಿಕೆ ಅಭಿಯಾನ ನಡೆಸುತ್ತ ಬಂದ ಪರಿಣಾಮ 2018ರಲ್ಲಿ ಭಾರತ ಪೋಲಿಯೋ ಮುಕ್ತ ರಾಷ್ಟ್ರವೆಂದು ವಿಶ್ವ ಆರೋಗ್ಯ ಸಂಸ್ಥೆ ಘೋಷಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ವರ್ಷ ತಾಲೂಕಿನಲ್ಲಿ ಪೊಲಿಯೊ ಹನಿ ಹಾಕಿರಲಿಲ್ಲ. ಈ ವರ್ಷ ತಾಲೂಕಿನಾದ್ಯಂತ ಪೋಲಿಯೋ ಹನಿ ಹಾಕಲಾಗುವುದು ಎಂದರು.

ಅಭಿಯಾನ ಯಶಸ್ವಿಯಾಗಿ ನಡೆಸಲು ಆರೋಗ್ಯ ಇಲಾಖೆ ಸಿದ್ಧತೆ ಕೈಗೊಂಡಿದೆ. ತಾಲೂಕಿನಲ್ಲಿ ಇಂಡಿಯ ಸಾರ್ವಜನಿಕ ಕೇಂದ್ರ ಸೇರಿ ಎಲ್ಲ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಗ್ರಾಪಂ ಕಚೇರಿ, ಶಾಲೆ, ಅಂಗನವಾಡಿ ಕೇಂದ್ರಗಳು, ದೇವಸ್ಥಾನಗಳಲ್ಲಿ ಪೋಲಿಯೋ ಹನಿ ಹಾಕಲಾಗುತ್ತದೆ. ಇಂಡಿ ತಾಲೂಕಿನ ಒಟ್ಟು 264 ಕೇಂದ್ರಗಳಲ್ಲಿ ಪೋಲಿಯೋ ಲಸಿಕೆ ಹಾಕಲಾಗುತ್ತಿದೆ. ಒಟ್ಟು 528 ಸಿಬ್ಬಂದಿ ಕಾರ್ಯ ನಿರ್ವಹಿಸುವರು ಎಂದರು.

ಪ್ರತಿ ತಂಡದಲ್ಲಿ ತಲಾ ಇಬ್ಬರು ಪೋಲಿಯೋ ಹನಿ ಹಾಕುವ ಸಿಬ್ಬಂದಿ, ತಲಾ ಇಬ್ಬರು ಸಹಾಯಕರು ಇರಲಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಅಂಗನವಾಡಿ ಕಾರ್ಯಕರ್ತೆಯರ ನೆರವು ಪಡೆಯಲಾಗುತ್ತಿದೆ. ಶಿಕ್ಷಣ, ಸಾರಿಗೆ, ಕಂದಾಯ ಸೇರಿ ಸರ್ಕಾರಿ ಇಲಾಖೆಗಳು ಹಾಗೂ ಲಯನ್ಸ್ ಕ್ಲಬ್, ಅನೇಕ ಸಂಘಟನೆಗಳ ಸಹಯೋಗ ಪಡೆಯಲಾಗುತ್ತಿದೆ. ಮಾ.3 ರಂದು ಬೂತ್‌ಗಳಲ್ಲಿ ಪೋಲಿಯೋ ಹನಿ ನೀಡಲಾಗುತ್ತಿದೆ. ನಗರ ಪ್ರದೇಶದಲ್ಲಿ ಮಾ.4, 5 ಮತ್ತು 6 ರಂದು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮಾ.4 ಮತ್ತು 5 ರಂದು ಮನೆ ಮನೆ ತೆರಳಿ 5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಹನಿ ನೀಡಲಾಗುತ್ತದೆ ಎಂದರು. ಆರೋಗ್ಯ ಶಿಕ್ಷಣಾಧಿಕಾರಿ ಸುನಂದಾ ಅಂಬಲಗಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net