ಮಾ.26ರಂದು ಶ್ರೀ ಕಾಳಿಕಾಂಬ, ಕರ್ಮಠೇಶ್ವರ ದೇವಾಲಯ ಲೋಕಾರ್ಪಣೆ

ಮಾ.26ರಂದು ಶ್ರೀ ಕಾಳಿಕಾಂಬ, ಕರ್ಮಠೇಶ್ವರ ದೇವಾಲಯ ಲೋಕಾರ್ಪಣೆ
Published on

ಹಾಸನ: ನಗರದ 24ನೇ ವಾರ್ಡ್ ವ್ಯಾಪ್ತಿಯಲ್ಲಿ ನವೀಕರಣಗೊಳ್ಳುತ್ತಿರುವ ಶ್ರೀ ಕಾಳಿಕಾಂಬ ಮತ್ತು ಕರ್ಮಠೇಶ್ವರ ದೇವಾಲಯದ ಲೋಕಾರ್ಪಣೆಗೆ ಸಿದ್ಧವಾಗಿದ್ದು ಮಾರ್ಚ್ 26 ರಿಂದ 30ರವರೆಗೂ ಐದು ದಿನಗಳ ಕಾಲ ಬೃಹತ್ ಶಿಲಾಮಯ ದೇವಸ್ಥಾನದ ದೇವರ ಪ್ರಾಣ ಪ್ರತಿಷ್ಠಾಪನೆ, ಲೋಕಾರ್ಪಣೆ ಮತ್ತು ಉತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಾಲಯ ನವೀಕರಣ ಸಮಿತಿ ಅಧ್ಯಕ್ಷ ಎಚ್.ಕೆ. ಆನಂದ್ ತಿಳಿಸಿದರು.
ದೇವಾಲಯದ ಆವರಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಹು ಪ್ರಾಚೀನವಾದ ಈ ದೇವಾಲಯ ಮತ್ತು ಸಭಾಂಗಣವು ಪ್ರತ್ಯೇಕವಾಗಿರಬೇಕೆಂದು ಅಷ್ಟಮಂಗಲ ಪ್ರಶ್ನ ಚಿಂತನೆ ಬಂದ ಹಿನ್ನಲೆಯಲ್ಲಿ ದೇವಾಲಯ ನವೀಕರಣ ಮಾಡಲಾಗುತ್ತಿದೆ. ಸಂಪೂರ್ಣ ಶಿಲಾಮಯವಾದ ಈ ದೇವಾಲಯವನ್ನು ಸುಮಾರು 5 ಕೋಟಿ ರೂಪಾಯಿ ವೆಚ್ಚದಲ್ಲಿ ದಾನಿಗಳು ಮತ್ತು ಸಮಾಜ ಬಾಂಧವರ ಪೂರ್ಣ ಸಹಕಾರದಿಂದ ನಿರ್ಮಾಣ ಮಾಡಲಾಗಿದೆ ಎಂದರು.
ಹಾಸನ ತಾಲೂಕು ವಿಶ್ವಕರ್ಮ ಸಮಾಜದ ಅಧ್ಯಕ್ಷ ಎಚ್.ಬಿ. ಕುಮಾರಾಚಾರ್ ಮಾತನಾಡಿ, ಕಳೆದ ಎರೆಡು ವರ್ಷಗಳಿಂದ ಕಾರ್ಕಳದ ಪ್ರಖ್ಯಾತ ಶಿಲ್ಪಿ ಕೃಷ್ಣಾಚಾರ್ಯ ಅವರು ದೇವಾಲಯಗಳ ವಾಸ್ತುಶಾಸ್ತ್ರ ಅನ್ವಯ ನಿರ್ಮಾಣ ಮಾಡಿರುವ ದೇವಾಲಯದಲ್ಲಿ ಶ್ರೀ ಕಾಳಿಕಾಂಬ ಮತ್ತು ಕರ್ಮಠೇಶ್ವರ ದೇವರುಗಳಿಗೆ ವಿಶೇಷ ಗರ್ಭಗುಡಿ ನಿರ್ಮಿಸಲಾಗಿದೆ. ಇದಕ್ಕೆ ಪೂರಕವಾಗಿ ಸಮಾಜದ ವಿವಿಧ ಸಂಘಟನೆಗಳ ಗುರು ಹಿರಿಯರ ಸಲಹೆ ಸಹಕಾರ ಪಡೆಯಲಾಗಿದೆ ಎಂದು ವಿವರಿಸಿದರು.
ದೇವಾಲಯದ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಎಚ್.ವಿ. ಹರೀಶ್ ಮಾತನಾಡಿ, ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅರೇಮಾದನಹಳ್ಳಿ ಮಠದ ಶ್ರೀ ಶಿವಸುಜ್ಞಾನತೀರ್ಥ ಮಹಾಸ್ವಾಮಿಗಳು, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗಡೆ, ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ಶಿಲ್ಪಿ ಅರುಣ್ ಯೋಗಿರಾಜ್, ಸಮಾಜದ ಎಲ್ಲ ಸ್ವಾಮೀಜಿಗಳು ಮತ್ತು ಹಲವು ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.
ಈ ವೇಳೆ ಸಮಾಜದ ಮುಖಂಡರಾದ ಎ. ಬ್ಯಾಟರಂಗಾಚಾರ್, ಎಚ್.ವಿ. ಹರೀಶ್, ಕೇಶವಪ್ರಸಾದ್, ಅನಿಲ್ ಪದ್ಮನಾಭ, ಎಚ್.ಕೆ. ಸತೀಶ್, ಶ್ರೀನಿವಾಸ್, ಗೋಪಾಲಾಚಾರ್, ಶ್ರೀಕಂಠಮೂರ್ತಿ, ಲೋಕೇಶ್, ಸುರೇಶ್, ಆನಂದ್, ನಾಗೇಶ್ ಮತ್ತು ಮೋಹನ್ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net