

ಹಾಸನ: ಸಕಲೇಶಪುರ ತಾಲೂಕಿನ ಹೆತ್ತೂರಿನಲ್ಲಿ ಮಾ. 23ರಿಂದ ಎರಡು ದಿನ ನಡೆಯುವ 22ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರ ರಥಕ್ಕೆ ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಶಾಸಕ ಎಚ್.ಪಿ.ಸ್ವರೂಪ್ ಹಾಗೂ ಸಾಹಿತಿಗಳು ಹಸಿರು ಬಾವುಟ ಪ್ರದರ್ಶಿಸುವುದರ ಮೂಲಕ ಶನಿವಾರ ಚಾಲನೆ ನೀಡಿದರು.
ನಂತರ ಮಾತನಾಡಿದ ಶಾಸಕ ಸ್ವರೂಪ್ ಪ್ರಕಾಶ್, ಸಕಲೇಶಪುರದ ಹೆತ್ತೂರಿನಲ್ಲಿ 22ನೇ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ನಮಗೆಲ್ಲಾ ಸಂತೋಷ ತಂದಿದೆ. ಗ್ರಾಮೀಣ ಭಾಗದಲ್ಲಿ ಜಿಲ್ಲಾ ಸಮ್ಮೇಳನವನ್ನು ಆಯೋಜನೆ ಮಾಡುವ ಮೂಲಕ ನುಡಿ ಹಬ್ಬವನ್ನು ಹಳ್ಳಿಗಳಿಗೆ ತೆಗೆದುಕೊಂಡು ಹೋಗಿರುವ ಕಸಾಪ ಜಿಲ್ಲಾಧ್ಯಕ್ಷರ ಕಾರ್ಯ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಸಾಪ ಜಿಲ್ಲಾಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿ, ಗ್ರಾಮಾಂತರ ಪ್ರದೇಶದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಬೇಕು ಎನ್ನುವುದು ಮೊದಲಿನಿಂದಲೂ ನಮ್ಮೆಲ್ಲರ ಆಶಯವಾಗಿತ್ತು. ಕಳೆದ ಎರಡು ವರ್ಷವೂ ಕೂಡ ಗ್ರಾಮೀಣ ಭಾಗದಲ್ಲೇ ಸಮ್ಮೇಳನ ನಡೆಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಸಮ್ಮೇಳನದ ಪ್ರಚಾರ ರಥ ಪ್ರಯಾಣ ಮಾಡಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷೆ ಶೈಲಜಾ ಹಾಸನ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮಾಜಿ ಅಧ್ಯಕ್ಷ ಎಚ್.ಬಿ. ಮದನ್ ಗೌಡ, ಹಿರಿಯ ಪತ್ರಕರ್ತ ಜೆ.ಆರ್. ಕೆಂಚೇಗೌಡ, ಕವಯತ್ರಿ ಸವಿತಾ ನಾಗಭೂಷಣ್, ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಎಚ್.ಎಲ್. ಪುಷ್ಪಾ, ಕಸಾಪ ಗೌರವ ಕಾರ್ಯದರ್ಶಿ ಜಾವಗಲ್ ಪ್ರಸನ್ನ ಕುಮಾರ್, ಬಿ.ಆರ್. ಬೊಮ್ಮೇಗೌಡ, ಗೌರವ ಕೋಶಾಧ್ಯಕ್ಷರು ಬಿ.ಎನ್. ಜಯರಾಂ ಇತರರು ಇದ್ದರು.