ಮಾ. 13ರಂದು ಹಾಸನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆ ಆಗಮನ

ಮಾ. 13ರಂದು ಹಾಸನಕ್ಕೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕೆ ಆಗಮನ
Published on

ಹಾಸನ: ಲೋಕಸಭೆ ಚುನಾವಣೆ ಹಿನ್ನಲೆ ಮಾ. 13ರ ಬುಧವಾರ ಬೆಳಿಗ್ಗೆ 11 ಗಂಟೆಗೆ ನಗರದ ಜ್ಞಾನಾಕ್ಷಿ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ಸಮಾವೇಶ ಹಮ್ಮಿಕೊಂಡಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಾಲ್ಗೊಳ್ಳಲಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣತಿಳಿಸಿದರು.
2006 ರಿಂದ 2008 ಮತ್ತು 14 ತಿಂಗಳ ಅವಧಿಯಲ್ಲಿ ನಮ್ಮ ಸರ್ಕಾರ ನೀಡಿರುವ ಕೊಡುಗೆಗಳ ಕುರಿತು ಚರ್ಚಿಸಲಿದ್ದಾರೆ. ಜಿಲ್ಲೆಯ ಎಲ್ಲಾ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಭಾಗವಹಿಸುತ್ತಾರೆ.ಲೋಕಸಭೆ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಕುರಿತು ನನಗೇನು ಗೊತ್ತಿಲ್ಲ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗು ಎಚ್.ಡಿ.ಕುಮಾರಸ್ವಾಮಿ ಅವರು ನೋಡಿಕೊಳ್ಳುತ್ತಾರೆ. ಹಾಸನ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾರೆಂಬುದು ನನಗೆ ಗೊತ್ತಿಲ್ಲ ಎಂದು ಸುದ್ದಿಗೋಷ್ಠಿಯಲ್ಲಿ ಪತ್ರಕರ್ತರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜಿಲ್ಲಾದ್ಯಂತ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದ್ದು, ಜಿಲ್ಲಾಧಿಕಾರಿಗಳು ಕೂಡಲೇ ಶಾಸಕರಿಗೆ ಅನುದಾನ ಬಿಡುಗಡೆ ಮಾಡಬೇಕು ಬರ ನಿರ್ವಹಣೆಗಾಗಿ ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 25 ಲಕ್ಷ ರೂಪಾಯಿ ಅನುದಾನ ಬಂದಿದೆ. ಆದರೆ ಜಿಲ್ಲಾಧಿಕಾರಿಗಳು ತಾವೇ ಗ್ರಾಮಗಳಿಗೆ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸುತ್ತೇನೆ ಎನ್ನುತ್ತಾರೆ. ನಮ್ಮ ಮೇಲೆ ವಿಶ್ವಾಸವಿಲ್ಲದಿದ್ದರೆ ಅವರೇ ಬಂದು ನೋಡಿಕೊಳ್ಳಲಿ. ಹಳ್ಳಿಗಳಲ್ಲಿ ಕುಡಿಯುವ ನೀರಿಲ್ಲ ಎಂದು ಶಾಸಕರು ಸುಳ್ಳು ಹೇಳುತ್ತಿದ್ದಾರಾ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬರ ನಿರ್ವಹಣೆಗೆ ಮೊದಲು ಪ್ರತಿ ಕ್ಷೇತ್ರಕ್ಕೆ 50 ಲಕ್ಷ ರೂ. ನೀಡಲಾಗುತ್ತಿತ್ತು. ಆದರೆ ಈ ಬಾರಿ ಕೇವಲ 25 ಲಕ್ಷ ರೂ. ಮಾತ್ರ ನೀಡಲಾಗಿದೆ. ಅದನ್ನು ಜಿಲ್ಲಾಧಿಕಾರಿಗಳು ನೀಡದೆ ಸತಾಯಿಸುತ್ತಿದ್ದಾರೆ. ಎಸ್‌ಡಿಆರ್‌ಎಫ್ ಹಾಗು ಎನ್‌ಡಿಆರ್‌ಎಫ್ ನಿಯಮಗಳನ್ನು ಬದಿಗೊತ್ತಿ ಪರಿಹಾರ ಕ್ರಮ ಕೈಗೊಳ್ಳಬೇಕು. ಮೇವು ಇಲ್ಲದೆ ಜಾನುವಾರುಗಳು ಪರದಾಡುತ್ತಿವೆ. ಎಷ್ಟೋ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಎದುರಾಗಿದೆ. ಮುಖ್ಯಮಂತ್ರಿಗಳು ಹಣ ನೀಡಿದ್ದೇವೆ ಎನ್ನುತ್ತಾರೆ, ಜಿಲ್ಲಾಧಿಕಾರಿಗಳು ಮಂತ್ರಿಗಳನ್ನ ಕೇಳಬೇಕು ಅಂತಾರೆ. ಹೀಗಾದರೆ ಜನರ ರಕ್ಷಣೆ ಹೇಗೆ ಸಾಧ್ಯ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಡಿಸ್ಟ್ರಿಕ್ಟ್ ಮಿನರಲ್ ಫೌಂಡೇಶನ್ಸ್ (ಡಿಎಂಎಫ್)ನಿಂದ ಜಿಲ್ಲಾಧಿಕಾರಿಗಳ ಖಾತೆಗೆ 5.50 ಕೋಟಿ ರೂ. ಅನುದಾನ ಬಂದಿದೆ. ಅದನ್ನು ಶಾಲಾ ಕಟ್ಟಡ, ಗಣಿಭಾದಿತ ಪ್ರದೇಶಗಳಿಗೆ ಮೂಲಸೌಲಭ್ಯ ಕಲ್ಪಿಸಲು ಬಳಸಬೇಕು. ಆದರೆ ಆರು ತಿಂಗಳಿಂದ ಆ ಅನುದಾನವನ್ನು ನೀಡುತ್ತಿಲ್ಲ. ಇದೇ ನಿರ್ಲಕ್ಷೃ ಧೋರಣೆ ಮುಂದುವರಿದರೆ ಜಿಲ್ಲಾಧಿಕಾರಿ ಕಚೇರಿ ಎದುರು ಪಂಚೆ ಹಾಸಿಕೊಂಡು ಮಲಗಿ ಪ್ರತಿಭಟನೆ ಮಾಡುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಹಾಸನಕ್ಕೆ 2 ಸಾವಿರ ಕೋಟಿ ರೂ.:
ಕೇಂದ್ರ ಭೂ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಜಿಲ್ಲೆಯ 2,068 ಕೋಟಿ ರೂ. ವೆಚ್ಚದ ರಸ್ತೆ ಕಾಮಗಾರಿಗೆ ಮೈಸೂರಿನಲ್ಲಿ ಭಾನುವಾರ ಚಾಲನೆ ನೀಡಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಅವರು ತಿಳಿಸಿದರು.
698 ಕೋಟಿ ರೂ. ವೆಚ್ಚದಲ್ಲಿ ಚಿಕ್ಕಮಗಳೂರು-ಬಿಳಿಕೆರೆ ರಾಷ್ಟ್ರೀಯ ಹೆದ್ದಾರಿ, 531 ಕೋಟಿ ರೂ. ವೆಚ್ಚದಲ್ಲಿ ಹೊಳೆನರಸೀಪುರಕ್ಕೆ ಬೈಪಾಸ್, ಚಿಕ್ಕನಹಳ್ಳಿ ಗ್ರಾಮದಿಂದ ಹುಲ್ಲಹಳ್ಳಿ ಗಡಿವರೆಗೆ ಸಂಪರ್ಕಿಸುವ ರಸ್ತೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. 46.53 ಕೋಟಿ ರೂ. ವೆಚ್ಚದಲ್ಲಿ ಬೇಲೂರು-ಬಿಳಿಕೆರೆ ರಸ್ತೆಯ ಹಂಗರಹಳ್ಳಿ ವರೆಗೆ 2 ಲೇನ್ ಆರ್‌ಓಬಿ ನಿರ್ಮಾಣ, 24.35 ಕೋಟಿ ರೂ. ವೆಚ್ಚದಲ್ಲಿ ಹೊಳೆನರಸೀಪುರದ ಗುತ್ತಮ್ಮ ತಮ್ಮೇಗೌಡ ಕಲ್ಯಾಣ ಮಂಟಪದಿಂದ ಗಾಂಧಿ ವೃತ್ತ, ಸರ್ಕಾರಿ ಪದವಿ ಪೂರ್ವ ಮಹಿಳಾ ಕಾಲೇಜಿನಿಂದ ಗಾಂಧಿ ವೃತ್ತದ ವರೆಗೆ ಚತುಷ್ಪಥ ಕಾಂಕ್ರಿಟ್ ರಸ್ತೆ ನಿರ್ಮಾಣ ಸೇರಿ ಹಾಸನದಲ್ಲಿ ಹೊರವರ್ತುಲ ರಸ್ತೆ, ಹಾಸನದ ಚನ್ನಪಟ್ಟಣ ವೃತ್ತದಿಂದ ಜಿಲ್ಲಾ ನ್ಯಾಯಾಲಯದ ವರೆಗೆ ಮೇಲ್ಸೇತುವೆ ಕಾಮಗಾರಿ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net