

ಹುಬ್ಬಳ್ಳಿ: ಮಾರ್ಚ್ 12ರಂದು ಧಾರವಾಡ ಐಐಟಿ ಉದ್ಘಾಟನೆ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡುವರು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.
ಹುಬ್ಬಳ್ಳಿಯಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿ ಮಧ್ಯಾಹ್ನ 2ಗಂಟೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಅಗಮಿಸುವರು. ಅಲ್ಲಿಂದ 2.10ಕ್ಕೆ ಧಾರವಾಡಕ್ಕೆ ಪ್ರಯಾಣಿಸಿ ಐಐಟಿ ಉದ್ಘಾಟಿಸುವರು. ಐಐಟಿ ಪಕ್ಕದ ಮೈದಾನದಲ್ಲಿ ಸಾರ್ವಜನಿಕ ಸಭೆ ಆಯೋಜಿಸಲಾಗಿದೆ ಎಂದರು.
ಹುಬ್ಬಳ್ಳಿ ಹಾಗೂ ಬೆಳಗಾವಿಯಲ್ಲಿ ನಡೆದ ಪ್ರಧಾನಿಯವರ ರೋಡ್ ಶೂ ಹಾಗೂ ಸಾರ್ವಜನಿಕ ಸಭೆಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಮೋದಿ ಅವರು ಪ್ರಧಾನಿ ಆದಾಗಿನಿಂದ (2014) ಕರ್ನಾಟಕದಲ್ಲಿ ಕಾಂಗ್ರೆಸ್ ಒಂದು ಲೋಕಸಭೆ ಹಾಗೂ ಎರಡು ವಿಧಾನಸಭೆ ಚುನಾವಣೆಯಲ್ಲಿ ನೆಲಕಚ್ಚಿದೆ. ಸ್ವತಃ ಸಿದ್ದರಾಮಯ್ಯ ಸೋತಿದ್ದಾರೆ. ಹಾಗಾಗಿ ಅವರಿಗೆ ಮೋದಿ ಅವರು ರಾಜ್ಯಕ್ಕೆ ಭೇಟಿ ನೀಡಿದರೆ ಭಯ ಕಾಡುತ್ತಿದೆ ಎಂದರು.
ಲೋಕಾಯುಕ್ತವನ್ನು ಬಿಜೆಪಿ ಬಲಪಡಿಸಿದೆ. ಕಾಂಗ್ರೆಸ್ ಎಸಿಬಿ ರಚನೆ ಮಾಡಿ ಲೋಕಾಯುಕ್ತ ಸಂಸ್ಥೆಯನ್ನು ದುರ್ಬಲಗೊಳಿಸಿತ್ತು. ಲೋಕಾಯುಕ್ತ ಹಾಗೂ ಎಸಿಬಿ ಎರಡೂ ಸಂಸ್ಥೆಯನ್ನು ಹಲ್ಲಿಲ್ಲದ ಹುಲಿಯನ್ನಾಗಿ ಮಾಡಿದ್ದರು. ಶಾಸಕ ಮಾಡಾಳ ವಿರುಪಾಕ್ಷಪ್ಪ ಪ್ರಕರಣದಲ್ಲಿ ಕಾನೂನು ಕ್ರಮ ಆಗುತ್ತದೆ. ಲೋಕಾಯುಕ್ತ ಕಾರ್ಯನಿರ್ವಹಣೆಯಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ ಎಂದರು.