ಮಾ.10ರಂದು ಬಹುಜನರ ನಡಿಗೆ-ಪಾರ್ಲಿಮೆಂಟ್ ಕಡೆಗೆ ವಿಭಾಗ ಮಟ್ಟದ ಸಮಾವೇಶ

ಮಾ.10ರಂದು ಬಹುಜನರ ನಡಿಗೆ-ಪಾರ್ಲಿಮೆಂಟ್ ಕಡೆಗೆ ವಿಭಾಗ ಮಟ್ಟದ ಸಮಾವೇಶ
Published on

ಹಾಸನ: ಸಕಲೇಶಪುರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಮಾ.10ರ ಬೆಳಿಗ್ಗೆ 11 ಗಂಟೆಗೆ ಬಹುಜನರ ನಡಿಗೆ-ಪಾರ್ಲಿಮೆಂಟ್ ಕಡೆಗೆ ವಿಭಾಗ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿ ಜಿಲ್ಲಾಧ್ಯಕ್ಷ ಹರೀಶ್ ಅತ್ನಿ ಅವರು ತಿಳಿಸಿದರು.
ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನಲೆ ಪಕ್ಷ ಸಂಘಟನೆ ಹಾಗು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಸಾರ್ವಜನಿಕರಿಗೆ ತಿಳಿಸುವುದು ಸಮಾವೇಶದ ಉದ್ದೇಶವಾಗಿದೆ. ರಾಜ್ಯಸಭೆ ಸದಸ್ಯ ರಾಮ್ ಜಿ ಗೌತಮ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಬಿಎಸ್‌ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಬಿಎಸ್‌ಪಿ ರಾಜ್ಯ ಸಂಯೋಜಕರಾದ ನಿತಿನ್ ಸಿಂಗ್, ಎಂ.ಗೋಪಿನಾಥ, ಎಂ.ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್ ಪಾಲ್ಗೊಳ್ಳಲಿದ್ದಾರೆ ಎಂದು ಗುರುವಾರ ಸುದ್ದಿಗೋಷ್ಠಯಲ್ಲಿ ಹೇಳಿದರು.
ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಸಂವಿಧಾನ ಬದಲಾವಣೆಯ ಚರ್ಚೆಗಳು ಜೋರಾಗಿ ನಡೆಯುತ್ತಿವೆ. ಬಿಜೆಪಿಯ ಬಹುತೇಕ ನಾಯಕರು ಸಂವಿಧಾನ ಬದಲಾವಣೆಯ ಮಾತುಗಳನ್ನಾಡುತ್ತಾರೆ. ಇದು ಹಂತ ಹಂತವಾಗಿ ದೇಶದಲ್ಲಿ ಸರ್ವಾಧಿಕಾರ ಹೇರುವ ತಂತ್ರವಾಗಿದ್ದು, ಪ್ರಜಾಪ್ರಭುತ್ವ ಉಳಿಯಬೇಕೆಂದರೆ ಬಿಜೆಪಿ ಅಧಿಕಾರದಿಂದ ದೂರ ಇರಬೇಕು. 2014ರಲ್ಲಿ ಕೇಂದ್ರ ಸರ್ಕಾರಿ ಹುದ್ದೆಗಳಲ್ಲಿ 2.38 ಲಕ್ಷ ಇದ್ದ ಎಸ್‌ಸಿ ನೌಕರರ ಸಂಖ್ಯೆ ಈಗ 1.45 ಲಕ್ಷಕ್ಕೆ ಕುಸಿದಿದೆ. 1.15 ಎಸ್‌ಟಿ ನೌಕರರ ಸಂಖ್ಯೆ ಈಗ 85 ಸಾವಿರ ಮತ್ತು 2.06 ಲಕ್ಷ ಇದ್ದ ಒಬಿಸಿ ನೌಕರರು ಈಗ 1.84 ಲಕ್ಷಕ್ಕೆ ಇಳಿದಿದ್ದಾರೆ. ಉದ್ಯೋಗದಲ್ಲಿ ಹಿಂದುಳಿದ ವರ್ಗದವರಿಗೆ ಅನ್ಯಾಯವಾಗುತ್ತಿದ್ದು, ಈ ಎಲ್ಲಾ ಸಮಸ್ಯೆಗಳನ್ನು ದೇಶದ ಜನರು ಅರ್ಥ ಮಾಡಿಕೊಳ್ಳಬೇಕಿದೆ ಎಂದರು.
ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಶಿವಮ್ಮ, ಲೋಹಿತ್ ಕಡೇಗರ್ಜೆ, ವಿರೇಶ್, ಮಲ್ಲಯ್ಯ, ಸೋಮಶೇಖರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net