

ಚಾಮರಾಜನಗರ: ಜಿಲ್ಲೆಯ ಸೃಜನಶೀಲ ಸಾಹಿತಿ ಎಂದೇ ಹೆಸರಾಗಿರುವ ಮಹೇಶ್ ಹರವೆ ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ನೀಡುವ 2022ನೇ ಸಾಲಿನ ‘ಸಾಹಿತ್ಯ ಶ್ರೀ’ ಪ್ರಶಸ್ತಿ ದೊರಕಿದೆ. ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಗಮನಾರ್ಹವಾದ ಸೇವೆಯನ್ನು ಗುರುತಿಸಿ 10 ಜನ ಸಾಹಿತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ 2022ನೇ ಸಾಲಿನ ಸಾಹಿತ್ಯಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.
ಅದರಲ್ಲಿ ಚಾಮರಾಜನಗರ ತಾಲೂಕಿನ ಹರವೆ ಗ್ರಾಮದವರಾದ ಸಾಹಿತಿ ಮತ್ತು ಸಂಶೋಧಕ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು 25 ಸಾವಿರ ರೂ, ನಗದು, ಲಕ, ಶಾಲು, ಹಾರ ತುರಾಯಿ, ಪ್ರಮಾಣ ಪತ್ರ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿಯನ್ನು ಒಳಗೊಂಡಿದೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾದ ಎಲ್.ಎನ್.ಮುಕುಂದರಾಜ್ ಅಧ್ಯಕ್ಷತೆಯಲ್ಲಿ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಸರ್ವಾನುಮತದಿಂದ ಸಾಹಿತಿಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಪ್ರಾಚಾರ್ಯರಾಗಿ ಸೇವೆ:
ವಿಮರ್ಶೆ, ಅನುವಾದ, ಸಂಸ್ಕೃತಿ ಚಿಂತನೆಯಲ್ಲಿ ತೊಡಗಿಕೊಂಡಿರುವ ಸಾಹಿತಿ ಮಹೇಶ್ ಹರವೆ ಅವರು ಪದವಿಪೂರ್ವ ಕಾಲೇಜಿನಲ್ಲಿ ಉಪನ್ಯಾಸಕರಾಗಿ, ಪ್ರಾಚಾರ್ಯರಾಗಿ ಕಳೆದ 34 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕುರುಡಿಗೆ ಬೆಳಕು ನೆಪವಲ್ಲ (ಕಬೀರರ ಪದಗಳ ಅನುವಾದ), ವಿಮಲ ಕೀರ್ತಿ ನಿರ್ದೇಶ ಅರಿವು ಅನುಭವಗಳ ಸಂಗಮ, ಸಂಪಾದನೆ-ಯುಗಪಲ್ಲಟ (ಯು.ಆರ್.ಅನಂತಮೂರ್ತಿ ಅವರ ಲೇಖನಗಳ ಸಂಗ್ರಹ), ದೇವಯ್ಯ ಹರವೆ ಅವರ ಸಮಗ್ರ ಸಾಹಿತ್ಯ ಸಂಪುಟ, ನಿಜಗುಣ ಶಿವಯೋಗಿ ಮತ್ತು ಮುಪ್ಪಿನ ಷಡಕ್ಷರಿ ಅವರ ತತ್ವಪದ ಸಂಪುಟ, ಬೆಳಗು ಬೆಳಕೆ ಕತ್ತಲೊಡಲಿಂದ(ಚಾಮರಾಜನಗರ ಮತ್ತು ಮೈಸೂರು ಜಿಲ್ಲೆಯ ತತ್ವಪದ ಸಂಗ್ರಹ) ಪುಸ್ತಕಗಳನ್ನು ರಚಿಸಿದ್ದಾರೆ.
ಕರ್ನಾಟಕ ಸಮಗ್ರ ತತ್ವಪದ ಸಂಪುಟ ಜಿಲ್ಲಾ ಸಂಪಾದಕರಾಗಿ, ನಾಡಿನ ಎಲ್ಲಾ ವಿಶ್ವವಿದ್ಯಾಲಯದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗಿಯಾಗಿದ್ದಾರೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ, ಕುವೆಂಪು ಭಾಷಾ ಭಾರತಿ , ಕನ್ನಡ ಪುಸ್ತಕ ಪ್ರಾಧಿಕಾರ ಮುಂತಾದ ಸಂಸ್ಥೆಗಳಲ್ಲಿ ಸಾಹಿತ್ಯ ಮತ್ತು ಸಂಸ್ಕೃತಿ ಕುರಿತ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿದ್ದಾರೆ. ಅವರ ವಿಮರ್ಶೆ, ಅನುವಾದ, ಸಂಸ್ಕೃತಿ ಕುರಿತ ನೂರಾರು ಲೇಖನಗಳು ಪ್ರಕಟಗೊಂಡಿದೆ.
ಜಿಲ್ಲೆಯಲ್ಲಿ ನನಗಿಂತಲೂ ಬರೆದವರು ತುಂಬಾ ಜನರು ಇದ್ದಾರೆ, ಅವರನ್ನೆಲ್ಲ ದಾಟಿಕೊಂಡು ನನಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿರುವುದು ಸಂಕೋಚವನ್ನು ಉಂಟುಮಾಡಿದೆ. ಅಕಾಡೆಮಿ ಪ್ರಶಸ್ತಿಯ ಬಗ್ಗೆ ಗೌರವ ಮತ್ತು ಅಗಾಧವಾದ ಪ್ರೀತಿ ಇರುವುದರಿಂದ ಖುಷಿಯಾಗಿದೆ.
ಮಹೇಶ್ ಹರವೆ, ಸಾಹಿತಿ, ಚಾಮರಾಜನಗರ