

ಹಾಸನ: ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಮಹೇಶ್ ಜೋಷಿಯವರ ಸರ್ವಾಧಿಕಾರಿ ಧೋರಣೆ ಖಂಡಿಸಿ ಹಾಗೂ ಅವರನ್ನು ರಾಜ್ಯಾಧ್ಯಕ್ಷ ಹುದ್ದೆಯಿಂದ ಅಮಾನತ್ತುಗೊಳಿಸಲು ಆಗ್ರಹಿಸಿ ಹಾಸನ ಜನಪರ ಒಕ್ಕೂಟದ ಸಂಘಸಂಸ್ಥೆಗಳು ಮೇ 28ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಜನಪದ ವಿದ್ವಾಂಸ ಮೇಟಿಕರೆ ಹಿರಿಯಣ್ಣ ತಿಳಿಸಿದರು.
ಜಿಲ್ಲೆಗಳ ಅಧ್ಯಕ್ಷರು ಕೂಡ ಜನರಿಂದ ಆಯ್ಕೆಯಾದವರು ಎಂಬ ಕನಿಷ್ಠ ಪ್ರಜ್ಞೆ ಇಲ್ಲದೇ ತಮ್ಮನ್ನು ಪ್ರಶ್ನೆ ಮಾಡುವ ಜಿಲ್ಲಾ ಅಧ್ಯಕ್ಷರಿಗೆ ನೋಟೀಸ್ ನೀಡುವ ಕೆಲಸ ಮಾಡಿದ್ದಾರೆ. ಕಾರ್ಯಕಾರಿ ಸಮಿತಿಯಲ್ಲಿ ತಮಗೆ ಬೇಕಾದವರನ್ನು ಮಾತ್ರ ಕೂರಿಸಿಕೊಂಡು ತಮಗೆ ಇಷ್ಟ ಬಂದಂತೆ ಪರಿಷತ್ತನ್ನು ನಡೆಸಿಕೊಂಡು ಹೋಗುತ್ತಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
ಮಂಡ್ಯದಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೋಟ್ಯಂತರ ರೂ. ಅವ್ಯವಹಾರ ನಡೆದಿದೆ ಎಂದು ದೂರು ದಾಖಲಾಗಿದೆ. ಅದೂ ಅಲ್ಲದೇ ಆತಿಥ್ಯ ವಹಿಸಿದ್ದ ಮಂಡ್ಯ ಜಿಲ್ಲೆಗೆ ಬರಬೇಕಾದ ಹಣವನ್ನು ಕೊಡದೇ ದ್ವೇಷದ ಮನಸ್ಥಿತಿ ಪ್ರದರ್ಶಿಸುತ್ತಿದ್ದಾರೆ. ಮಹೇಶ್ ಜೋಷಿಯವರು ಈ ಹಿಂದೆ ದೂರದರ್ಶನದಲ್ಲಿ ತಮ್ಮ ಸಹೋದ್ಯೋಗಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಾಲಯ ಜೋಷಿ ಅವರನ್ನು ಅಪರಾಧಿ ಎಂದು ತೀರ್ಪು ಪ್ರಕಟಿಸಿದೆ. ಒಬ್ಬ ಅಪರಾಧಿ ಕನ್ನಡ ಸಾಹಿತ್ಯ ಪರಿಷತ್ತಿನ ಚುಕ್ಕಾಣಿ ಹಿಡಿದು ಕುಳಿತಿರುವುದು ಕನ್ನಡಿಗರ ದುರಂತವೇ ಸರಿ. ಏಕಾಏಕಿ ಕನ್ನಡ ಸಾಹಿತ್ಯ ಪರಿಷತ್ತಿನ ಬೈಲಾಕ್ಕೆ ತಿದ್ದುಪಡಿಗೆ ಮುಂದಾಗಿದ್ದಾರೆ. ಸರ್ವಾಧಿಕಾರಿ ಧೋರಣೆ ಇರುವ ವ್ಯಕ್ತಿ ಬೈಲಾ ತಿದ್ದುಪಡಿ ಮಾಡಲು ಮುಂದಾಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.
ಜಾನಪದ ಅಕಾಡೆಮಿ ಜಿಲ್ಲಾಧ್ಯಕ್ಷ ಹಂಪನಹಳ್ಳಿ ತಿಮ್ಮೇಗೌಡ ಮಾತನಾಡಿ, ಈ ಎಲ್ಲ ವಿಚಾರಗಳ ಹಿನ್ನೆಲೆಯಲ್ಲಿ ಹಾಸನ ಜನಪರ ಒಕ್ಕೂಟದ ಸಂಘ-ಸಂಸ್ಥೆಗಳು ಮೇ 28ರಂದು ಪ್ರತಿಭಟನೆ ನಡೆಸಲಾಗುವುದು. ಹಣಕಾಸಿನ ಅವ್ಯವಹಾರ ಆರೋಪ, ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರು ಹಾಗು ಪರಿಷತ್ತಿನ ಸದಸ್ಯರ ಜತೆಗೆ ಘನತೆಯಿಂದ ನಡೆದುಕೊಳ್ಳದ ಸರ್ವಾಧಿಕಾರಿ ಧೋರಣೆಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಮಹೇಶ್ ಜೋಷಿ ಅವರನ್ನು ಅಮಾನತ್ತಿನಲ್ಲಿಟ್ಟು ರಾಜ್ಯ ಸಾಹಿತ್ಯ ಪರಿಷತ್ತಿಗೆ ಆಡಳಿತಾಧಿಕಾರಿಯನ್ನು ನೇಮಿಸುವ ಹಾಗು ಇತರೆ ಬೇಡಿಕೆಗಳನ್ನು ಮುಂದಿಡಲು ಕನ್ನಡ ಭಾಷೆಯ, ಸಾಹಿತ್ಯಪರ ಸಂಘಟನೆಗಳ ಒಕ್ಕೂಟ ತೀರ್ಮಾನಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾಧ್ಯಕ್ಷ ಧರ್ಮೇಶ್, ಹಿರಿಯ ಸಾಹಿತಿ ಎನ್.ಎಲ್. ಚನ್ನೇಗೌಡ, ಹರೀಶ್, ಚಲಂ ಹಾಡ್ಲಹಳ್ಳಿ, ಇತರರು ಉಪಸ್ಥಿತರಿದ್ದರು.