

ಮೈಸೂರು: ಈ ಬಾರಿ ದಸರಾ ಮಹೋತ್ಸವದ ವೇಳೆ ಮಹಿಷ ದಸರಾ ಆಚರಿಸಲು ಮಹಿಷ ದಸರಾ ಆಚರಣಾ ಸಮಿತಿ ತೀರ್ಮಾನಿಸಿದೆ.
ಜನತೆಗೆ ಇತಿಹಾಸ ತಿಳಿಸುವ ಕೆಲಸವಾಗಿ 2015ರಿಂದಲೂ ಸಮಿತಿ ವತಿಯಿಂದ ಮಹಿಷ ದಸರಾ ಆಚರಿಸಲಾಗುತ್ತಿದೆ. ಆದರೆ, ಕಳೆದ 5 ವರ್ಷ ಬಿಜೆಪಿ ಸರ್ಕಾರದ ಆಡಳಿತವಿದ್ದ ವೇಳೆ ಇದಕ್ಕೆ ಅಡ್ಡಿಯುಂಟಾಗಿತ್ತು. ಅಭಿವ್ಯಕ್ತಿ ಸ್ವಾತಂತ್ರೃಹರಣವಾಗಿತ್ತು. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ತಮ್ಮ ಹುದ್ದೆಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂದು ಸಮಿತಿ ಪದಾಧಿಕಾರಿ, ಮಾಜಿ ಮೇಯರ್ ಪುರುಷೋತ್ತಮ್ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಕಿಡಿಕಾರಿದರು.
ಈಗಿನ ಸರ್ಕಾರ ಈ ಹಿಂದೆ ಮಹಿಷ ದಸರಾ ಆಚರಣೆಗೆ ಅಡ್ಡಿಪಡಿಸಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ ಅವರು, ಸಮಿತಿಯಿಂದ ಮಹಿಷ ದಸರಾ ಆಚರಣೆ ಕುರಿತು ಇನ್ನೂ ಅರ್ಜಿ ಹಾಕಿಲ್ಲ. ಆದಾಗ್ಯೂ, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರು ಆಚರಣೆಗೆ ಅವಕಾಶ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.
ನಿವೃತ್ತ ಪ್ರಾಧ್ಯಾಪಕ ಪ್ರೊ.ಮಹೇಶಚಂದ್ರಗುರು ಮಾತನಾಡಿ, ದಸರಾ ವೇಳೆ ಚಾಮುಂಡೇಶ್ವರಿ ಭಾವಚಿತ್ರ ಇರಿಸುವುದು ಜಾತ್ಯತೀತತೆಗೆ ವಿರುದ್ಧವಾಗಿದೆ. ಸರ್ಕಾರಕ್ಕೆ ಬದ್ಧತೆ ಇದ್ದರೆ ಸರ್ವ ಧರ್ಮಗಳಿಗೆ ಸೇರಿದವರ ಭಾವಚಿತ್ರ ಇರಿಸಲಿ. ಮಹಿಷ ಹಾಗೂ ಚಾಮುಂಡೇಶ್ವರಿ ಒಂದೇ ಕಾಲದಲ್ಲಿ ಹುಟ್ಟಿದವರಲ್ಲ. ಅವರು ಒಬ್ಬರನ್ನೊಬ್ಬರು ಭೇಟಿಯಾಗಿರಲು ಸಾಧ್ಯವೇ ಇಲ್ಲ. ಅಸುರರೆಂದರೆ ಕೊಲ್ಲುವವರಲ್ಲ, ರಕ್ಷಿಸುವವರು. ರಕ್ಕಸರೆಂದು ಯಾರೋ ಬರೆದುದ್ದನ್ನು ಏಕೆ ಈಗಲೂ ಅನುಸರಿಸಬೇಕು ಎಂದು ಪ್ರಶ್ನಿಸಿದರು. ಸಾಹಿತಿ ಪ್ರೊ.ಕೆ.ಎಸ್. ಭಗವಾನ್ ಮಾತನಾಡಿದರು.