

ನಾಗಮಂಗಲ: ಮಹಿಳೆಯರಿಗೆ ಉಚಿತ ಪ್ರಯಾಣವೆಂದು ಕೆಎಸ್‌ಆರ್‌ಟಿಸಿ ಸಿಬ್ಬಂದಿ ಮಹಿಳೆಯರ ಜತೆ ಅಗೌರವವಾಗಿ ನಡೆದುಕೊಳ್ಳುವುದು, ನಿಂದಿಸುವುದು ಅಥವಾ ನಿಲ್ದಾಣದಲ್ಲಿ ಬಸ್ ನಿಲ್ಲಿಸದೆ ನಿರ್ಲಕ್ಷ್ಯ ವಹಿಸುವುದು ಬೇಡ. ಅದೇ ರೀತಿ ಮಹಿಳಾ ಪ್ರಯಾಣಿಕರು ಕೂಡ ಸಿಬ್ಬಂದಿ ಜತೆ ಸೌಜನ್ಯದಿಂದ ವರ್ತಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಭಾನುವಾರ ಶಕ್ತಿ ಯೋಜನೆಗೆ ಚಾಲನೆ ನೀಡಿ ನಂತರ ಮಾತನಾಡಿದರು. ಬಸ್‌ಗಳಲ್ಲಿ ಮಹಿಳೆಯರು ಉಚಿತವಾಗಿ ಪ್ರಯಾಣಿಸುತ್ತಾರೆ ಎಂದು ಮಹಿಳೆಯರನ್ನು ನಿಂದಿಸುವುದು ಅಥವಾ ಅವರನ್ನು ಅಗೌರವದಿಂದ ಕಾಣುವುದು ಕಂಡುಬಂದರೆ ಸಂಬಂಧಪಟ್ಟ ಸಿಬ್ಬಂದಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ತಮ್ಮ ಗ್ರಾಮಗಳ ಗೇಟ್ ಬಳಿ ಬಸ್‌ಗಾಗಿ ಕಾಯುತ್ತಿದ್ದಲ್ಲಿ ಬಸ್ ನಿಲ್ಲಿಸಬೇಕು. ಬಸ್‌ಗೆ ಬರುವ ಮಹಿಳೆಯರ ಜತೆ ತಮ್ಮ ಸಹೋದರಿ, ತಾಯಿ ಎಂಬಂತೆ ಅವರ ಜತೆ ಗೌರವವಾಗಿ ನಡೆದುಕೊಳ್ಳಬೇಕು ಎಂದರು.
ರಾಜ್ಯದ ಗಡಿಯೊಳಗೆ ಮಹಿಳೆಯರು ಉಚಿತವಾಗಿ ಸಂಚರಿಸಬಹುದಾಗಿದೆ. ಆದರೆ ಯಾವುದಾದರೂ ಒಂದು ಗುರುತಿನ ಚೀಟಿ ನೀಡಿ ಉಚಿತ ಪ್ರಯಾಣದ ಟಿಕೆಟ್ ಪಡೆಯಬೇಕು. ಅಂತಾರಾಜ್ಯಕ್ಕೆ ತೆರಳುವ ಬಸ್‌ಗಳಲ್ಲಿ, ರಾಜಹಂಸ, ಐರಾವತ ಹಾಗೂ ಎಸಿ ಬಸ್‌ಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶವಿರುವುದಿಲ್ಲ. ಉಚಿತ ಬಸ್ ಎಂದು ಚುನಾವಣೆಯ ಸಂದರ್ಭದಲ್ಲಿ ಜನರಿಗೆ ಹೇಳುತ್ತಿದ್ದರೆ ಯಾರೂ ನಂಬುತ್ತಿರಲಿಲ್ಲ. ಹಳ್ಳಿಗಳಲ್ಲಿ ನಮ್ಮ ಭರವಸೆಗಳನ್ನು ಜನ ನಂಬದೆ ನಿರ್ಲಕ್ಷ್ಯವಾಗಿ ಮಾತನಾಡುತ್ತಿದ್ದರು. ಈಗ ರಾಜ್ಯದ ಜನತೆಗೆ ಕಾಂಗ್ರೆಸ್ ಸರ್ಕಾರದ ಭರವಸೆಗಳ ಮೇಲೆ ನಂಬಿಕೆ ಬಂದಿದೆ. ಮುಂದಿನ ಮೂರು ತಿಂಗಳೊಳಗೆ ಒಂದು ಸ್ಮಾರ್ಟ್‌ಕಾರ್ಡ್ ನೀಡಲಾಗುತ್ತದೆ. ಆನಂತರ ಮಹಿಳೆಯರು ಯಾವುದೇ ಗುರುತಿನ ಚೀಟಿಯನ್ನು ನೀಡುವ ಅವಶ್ಯಕತೆಯಿರುವುದಿಲ್ಲ ಎಂದರು.
ತಹಸೀಲ್ದಾರ್ ನಯೀಂಉನ್ನಿಸಾ, ಡಿವೈಎಸ್ಪಿ ಲಕ್ಷ್ಮೀನಾರಾಯಣ್‌ಪ್ರಸಾದ್, ಕೆಎಸ್‌ಆರ್‌ಟಿಸಿ ಜಿಲ್ಲಾ ವ್ಯವಸ್ಥಾಪಕ ನಾಗರಾಜು, ನಾಗಮಂಗಲ ಡಿಪೋ ಮ್ಯಾನೇಜರ್ ಮಹೇಶ್, ಪುರಸಭೆ ಮುಖ್ಯಾಧಿಕಾರಿ ಶ್ರೀನಿವಾಸ್, ಮುಖಂಡರಾದ ಕೃಷ್ಣೇಗೌಡ, ನಟರಾಜು, ಮುರ್ತುಜಾ, ಪುಟ್ಟಮ್ಮ, ವಸಂತಮಣಿ ಸೇರಿದಂತೆ ಮತ್ತಿತರಿದ್ದರು.