ಮಹಿಳೆಯರು ಸಾಧನೆ ಶಿಕ್ಷಣ ಅವಶ್ಯಕ

25 YERRISWAMY 05
Published on

ಬಳ್ಳಾರಿ ; ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎನ್ನುವ ನಾಣ್ಣುಡಿಯಂತೆ ಹೆಣ್ಣು ಮಕ್ಕಳು ಶಿಕ್ಷಣ ಪಡೆದಾಗ ಮಾತ್ರ ಸಮಾಜದಲ್ಲಿ ಸಾಧನೆಯ ಶಿಖರವೇರಲು ಸಾಧ್ಯ ಎಂದು ಎಸ್ಪಿ ಡಾ. ವಿ. ಜೆ. ಶೋಭಾರಾಣಿ ಹೇಳಿದರು.
ನಗರದ ಬಿಡಿಎಎ ಸಭಾಂಗಣದಲ್ಲಿ ರೀಡ್ಸ್ ಸಂಸ್ಥೆ, ಮಕ್ಕಳ ವಿಶೇಷ ಪೊಲೀಸ್ ಘಟಕ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಹಯೋಗದೊಂದಿಗೆ ಬುಧವಾರ ನಡೆದ ಬಾಲ್ಯ ವಿವಾಹ ನಿಷೇಧ, ಲಿಂಗ ತಾರತಮ್ಯ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ಹದಿ ಹರೆಯದ ಹೆಣ್ಣುಮಕ್ಕಳ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬ ಮಹಿಳೆಯೂ ಶಿಕ್ಷಣ ಪಡೆದು ಆರ್ಥಿಕ, ಸಾಮಾಜಿಕವಾಗಿ ಸಬಲೀಕರಣವಾಗಿ ಎಲ್ಲಾ ಕ್ಷೇತ್ರಗಳಲ್ಲಿ ಮುಂದೆ ಬರಬೇಕು ಎಂದು ಹೇಳಿದರು. ಯೌವನ ಸಮಯದಲ್ಲಿ ಹೆಣ್ಣು ಮಕ್ಕಳು ಯಾವುದೇ ತರಹದ ಆಕರ್ಷಣೆಗೆ ಒಳಗಾಗಿ ತಪ್ಪು ಹಾದಿ ಹಿಡಿಯದೇ, ಜೀವನದ ತಾತ್ಪರ್ಯ ಅರಿತುಕೊಂಡು ಮನೆಗೆ-ಊರಿಗೆ, ಮುಖ್ಯವಾಗಿ ಪೋಷಕರಿಗೆ ಕೀರ್ತಿ ತರುವ ಹಾಗೆ ಉತ್ತಮ ಸಾಧನೆ ಮಾಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಡಿವೈಎಸ್‌ಪಿ, ಪಿಎಸ್‌ಐ, ಮಹಿಳಾ ಪೊಲೀಸ್ ಪೇದೆ ಒಳಗೊಂಡಂತೆ ವಿಶೇಷ ಮಕ್ಕಳ ಪೊಲೀಸ್ ಘಟಕವಿದ್ದು, ಬಾಲ್ಯವಿವಾಹ, ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣ ಕಂಡುಬಂದಲ್ಲಿ ಮಾಹಿತಿ ನೀಡಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಮಾತನಾಡಿ, ಇತ್ತೀಚಿನ ದಿನಮಾನಗಳಲ್ಲಿ ಎಲ್ಲ ರಂಗಗಳಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚು ಸ್ಥಾನಮಾನ ಹೊಂದುತ್ತಿದ್ದಾರೆ. ಹೀಗಾಗಿ ಸಾಧನೆ ಮಾಡುವ ಹಂಬಲ ಎಲ್ಲರಲ್ಲೂ ಮೂಡಬೇಕು ಎಂದು ಹೇಳಿದರು. ಪ್ರಸ್ತುತದಲ್ಲಿ ಪ್ರೇಮ-ವಿವಾಹ ಪ್ರಕರಣಗಳಿಂದ ಹದಿ-ಹರೆಯದವರ ಜೀವನ ಹಾಳಾಗುತ್ತಿದೆ. ಹಾಗಾಗಿ ಹೆಣ್ಣುಮಕ್ಕಳು ಜಾಗೃತರಾಗಬೇಕು. ಶಿಕ್ಷಣದಿಂದ ನಿರ್ದಿಷ್ಠ ಗುರಿ ಹೊಂದಿ, ಸಮಾಜದಲ್ಲಿ ಉನ್ನತ ಸ್ಥಾನ-ಮಾನ ಹೊಂದಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ವಕೀಲೆ ಶಿವಲೀಲಾ, ನಿ. ವೈದ್ಯಾಧಿಕಾರಿ ಡಾ.ಮೋಹನ ಕುಮಾರಿ, ನಗರದ ವಿವಿಧ ಠಾಣೆಯ ಸಿಪಿಐ ಗಳಾದ ಸುಭಾಷ್ ಚಂದ್ರ, ಸಿದ್ದರಾಮೇಶ್ವರ ಗಡೇದ, ಅಯ್ಯನಗೌಡ ಪಾಟೀಲ್ ವಿವಿಧ ವಿಷಯಗಳ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಜಾಥಾ : ಬಾಲ್ಯ ವಿವಾಹ ನಿಷೇಧ, ಲಿಂಗ ತಾರತಮ್ಯ, ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಕುರಿತು ಜಿಲ್ಲಾ ಮಟ್ಟದ ಜಾಗೃತಿ ಜಾಥಾ ನಡೆಯಿತು. ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು, ಸ್ವ-ಸಹಾಯ ಸಂಘ ಸಂಸ್ಥೆಗಳ ಮಹಿಳೆಯರು ಭಾಗವಹಿಸಿ ನಿಲ್ಲಿಸಿ, ನಿಲ್ಲಿಸಿ, ಬಾಲ್ಯ ವಿವಾಹ ನಿಲ್ಲಿಸಿ, ಮಕ್ಕಳನ್ನು ಶಾಲೆಗೆ ಕಳುಹಿಸಿ, ದುಡಿಮೆ ಬೇಡ ಶಾಲೆ ಬೇಕು ಎನ್ನುವ ಘೋಷಣೆಗಳನ್ನು ಕೂಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net