

ಬೇಲೂರು: ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಯೋಗದೊಂದಿಗೆ ಟೌನ್ ಸಹಕಾರ ಸಂಘದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರು ಮುಂದಿನ ದಿನಗಳಲ್ಲಿ ಸ್ವಾವಲಂಬಿಯಾಗಿ ಜೀವನ ನಡೆಸಲಿ ಎಂಬ ಉದ್ದೇಶದಿಂದ ನಮ್ಮ ಶಿವಗಂಗಾ ಗ್ರಾನೈಟ್ ಸಂಸ್ಥೆಯಿಂದ ಉಚಿತವಾಗಿ 15 ಜನರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುತಿದ್ದೇವೆ ಎಂದು ಶಿವಗಂಗಾ ಗ್ರಾನೈಟ್ ಸಂಸ್ಥೆ ಮಾಲೀಕ ಹಾಗೂ ಕಾಂಗ್ರೆಸ್ ಮುಖಂಡ ಎಸ್.ಹೆಚ್.ರಾಜಶೇಖರ್ ಹೇಳಿದರು.
ಬೇಲೂರು ಟೌನ್ ಸಹಕಾರ ಸಂಘದಲ್ಲಿ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಯೋಗದೊಂದಿಗೆ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ತಮ್ಮ ಸಂಸ್ಥೆಯಿಂದ ಉಚಿತವಾಗಿ ಹೊಲಿಗೆ ಯಂತ್ರ ವಿತರಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಕೃಷಿ ಕ್ಷೇತ್ರವನ್ನು ಬಿಟ್ಟು ಬಹುತೇಕ ಗ್ರಾಮೀಣ ಭಾಗದ ಜನರು ನಗರದತ್ತ ಮುಖ ಮಾಡುತ್ತಿದ್ದಾರೆ. ಜತೆಗೆ ಹಲವಾರು ಕಂಪನಿಗಳಲ್ಲಿ ಕೆಲಸ ಮಾಡುವ ಮೂಲಕ ಜೀವನ ಸಾಗಿಸುತ್ತಿರುವುದು ಕಾಣುತಿದ್ದೇವೆ. ಈ ಹಿನ್ನೆಲೆಯಲ್ಲಿ ತರಬೇತಿ ಪಡೆದವರು ಬೇರೆಡೆ ಹೋಗದೆ ಇಲ್ಲಿಯೇ ಕುಟುಂಬದೊಂದಿಗೆ ಇದ್ದು ಜೀವನ ನಡೆಸಲಿ ಎಂಬ ಉದ್ದೇಶದಿಂದ ನಮ್ಮ ಶಿವಗಂಗಾ ಗ್ರಾನೈಟ್ ಸಂಸ್ಥೆಯಿಂದ ಉಚಿತವಾಗಿ ಹೊಲಿಗೆ ಯಂತ್ರಗಳನ್ನು ನೀಡುತಿದ್ದು, ಅವರುಗಳು ಈ ಮೂಲಕ ಸ್ವಾವಲಂಬಿ ಜೀವನ ನಡೆಸಲಿ. ಮುಂದಿನ ದಿನಗಳಲ್ಲಿ ನಮ್ಮ ಸಂಸ್ಥೆಯಿಂದ ಬಡವರ ಜೀವನೋಪಾಯಕ್ಕಾಗಿ ಅಗತ್ಯವಿರುವ ಪರಿಕರಗಳನ್ನೂ ಸಹ ನೀಡಲಾಗುವುದು. ದಾನ ಮಾಡುವುದು ನಮ್ಮ ಆತ್ಮತೃಪ್ತಿಗೆ ಹೊರತು ಪ್ರತಿಷ್ಠೆಗಾಗಿಯಲ್ಲ. ಆದ್ದರಿಂದ ಉಳ್ಳವರು ತಮ್ಮ ದುಡಿಮೆಯ ಒಂದು ಭಾಗವನ್ನು ಬಡವರ, ಶೋಷಿತಎ, ಅಂಗವಿಕಲರಿಗೆ ನೀಡುವ ಮೂಲಕ ಅವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರುವ ಕೆಲಸ ಮಾಡಬೇಕು. ಹಾಗೂ ಪ್ರತಿಯೊಬ್ಬರು ತಾವು ಮಾಡುವ ಕೆಲಸದ ಬಗ್ಗೆ ಕೀಳರಿಮೆ ತೊರೆದು ಕಾಯಕವನ್ನು ಸತ್ಯ ಶುದ್ದಿಯಾಗಿ ನಡೆಸಬೇಕು ಎಂದರು.
ಬೇಲೂರು ಟೌನ್ ಸಹಕಾರ ಸಂಘದ ಅಧ್ಯಕ್ಷ ಬಿ.ಎಲ್.ಧರ್ಮೇಗೌಡ ಮಾತನಾಡಿ, ಮೂರು ದಶಕಗಳಿಂದ ಪಟ್ಟಣದಲ್ಲಿ ಮಹಿಳೆಯರಿಗೆ ಅಗತ್ಯವಾದ ಹೊಲಿಗೆ ತರಬೇತಿ ನೀಡಲಾಗುತ್ತಿದೆ. ಹಿಂದಿನ ಜವಳಿ ಸಚಿವರಾಗಿದ್ದ ವರ್ತೂರು ಪ್ರಕಾಶ್‌ರವರು ಬಡವರ ಅನುಕೂಲಕ್ಕಾಗಿ ಜವಳಿ ಮತ್ತು ಕೈಮಗ್ಗ ಇಲಾಖೆಯಿಂದ ಸಹಕಾರ ನೀಡಿದ್ದರಿಂದ ಇಲ್ಲಿವರೆಗೂ 2300 ಕ್ಕೂ ಹೆಚ್ಚು ಮಹಿಳೆಯರು ಉಚಿತ ತರಬೇತಿ ಪಡೆದು ತಮ್ಮ ಜೀವನ ರೂಪಿಸಿಕೊಂಡಿದ್ದಾರೆ. ಅದೇ ರೀತಿ ಕಾಂಗ್ರೆಸ್ ಮುಖಂಡರು, ಸಮಾಜ ಸೇವಕ ಗ್ರಾನೈಟ್ ರಾಜಶೇಖರ್‌ರವರು ಸಂಸ್ಥೆಗೆ ಆಗನಮಿಸಿದ ಸಂದರ್ಭ ಉಚಿತವಾಗಿ ಹೊಲಿಗೆ ಯಂತ್ರ ನೀಡುವ ಭರವಸೆ ನೀಡಿದ್ದರು. ಅದರಂತೆ 15 ಹೊಲಿಗೆ ಯಂತ್ರವನ್ನು ನೀಡುವ ಮೂಲಕ ಕೊಟ್ಟ ಮಾತು ಉಳಿಸಿಕೊಂಡಿದ್ದಾರೆ. ಹೊಲಿಗೆ ಯಂತ್ರ ಪಡೆದ ಮಹಿಳೆಯರು ಇದರ ಸದೂಪಯೋಗ ಪಡಿಸಿಕೊಳ್ಳಬೇಕು ಎಂದರು.
ಕಾಂಗ್ರೆಸ್ ಮುಖಂಡರಾದ ಶಿವಣ್ಣ, ದೇವರಾಜ್, ಟೌನ್ ಸಹಕಾರ ಸಂಘದ ಕಾರ್ಯದರ್ಶಿ ನಂದಕುಮಾರ್, ನಿರ್ದೇಶಕರಾದ ನಿಂಗೇಗೌಡ, ರವಿಕುಮಾರ್, ರಾಮು, ಲಕ್ಷ್ಮಣ್‌ನಾಯಕ್, ಮಂಜುನಾಥಶೆಟ್ಟಿ, ಪ್ರಕಾಶ್, ಬಸವರಾಜ ಇತರರಿದ್ದರು.