

ಚಾಮರಾಜನಗರ: ಸಂವಿಧಾನದ ಅಡಿಯಲ್ಲಿ ಮಹಿಳೆಯರಿಗೆ ಹಲವಾರು ಹಕ್ಕು ಅಧಿಕಾರಗಳನ್ನು ನೀಡಿದ್ದರೂ ಇಂದಿಗೂ ಅವರು ದೌರ್ಜನ್ಯಗಳಿಂದ ಮುಕ್ತರಾಗಿಲ್ಲ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಬಿ.ಎಸ್.ಭಾರತಿ ಬೇಸರ ವ್ಯಕ್ತಪಡಿಸಿದರು.
ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನ ಸಭಾಂಗಣದಲ್ಲಿ ಜೆಎಸ್‌ಎಸ್ ಮಹಿಳಾ ಕಾಲೇಜು, ಹಿರಿಯ ವಿದ್ಯಾರ್ಥಿನಿಯರ ಸಂಘ, ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ಸ್ ಘಟಕ ಹಾಗೂ ಯುವ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಮಹಿಳೆಯರ ಹಕ್ಕು, ಅಧಿಕಾರಗಳ ಪರವಾಗಿ ಹೆಚ್ಚು ಮಾತನಾಡಲಾಗುತ್ತಿದೆ. ಆದರೆ ಅವರ ಮೇಲಿನ ದೌರ್ಜನ್ಯಗಳು ಇಂದಿಗೂ ಕಡಿಮೆಯಾಗಿಲ್ಲ. ಪೊಲೀಸ್ ಠಾಣೆಗಳು ಮತ್ತು ನ್ಯಾಯಾಲಯಗಳಲ್ಲೇ ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಸಂಧಾನ ಮಾಡುವ ಮೂಲಕ ದಾರಿತಪ್ಪಿಸುವ ಕೆಲಸವನ್ನು ಮಾಡಲಾಗುತ್ತಿದೆ ಎಂದರು.
ಮಹಿಳೆಯರು ಮನೋಸ್ಥೈರ್ಯವನ್ನು ಬೆಳೆಸಿಕೊಳ್ಳಬೇಕು. ಅವರ ಮೇಲಾಗುವ ದೌರ್ಜನ್ಯಗಳ ವಿರುದ್ಧ ಸೆಟೆದು ನಿಲ್ಲಬೇಕಿದೆ. ಮಹಿಳೆಯರು ಹೆಚ್ಚಿನ ಶಿಕ್ಷಣ ಪಡೆದುಕೊಂಡರೇ, ದೌರ್ಜನ್ಯಗಳ ವಿರುದ್ಧ ಹೋರಾಟ ಮಾಡಬಹುದಾಗಿದೆ. ತಮಿಳುನಾಡಿನಲ್ಲಿ ಶೇ.70 ರಷ್ಟು ಮಹಿಳಾ ನ್ಯಾಯಾಧೀಶರು ಇದ್ದು, ಇದು ರಾಜ್ಯದಲ್ಲೂ ಆಗಬೇಕಿದೆ ಎಂದು ಹೇಳಿದರು.
ದಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರೇಂಜರ್ಸ್ ಘಟಕ ಸಂಚಾಲಕಿ ಡಾ.ಎ.ಆರ್.ಸುಷ್ಮಾ ಮಾತನಾಡಿ, ಮಹಿಳೆಯರಿಗೆ ಸಂವಿಧಾನದ ಅಡಿಯಲ್ಲಿ ಹಲವಾರು ಹಕ್ಕುಗಳನ್ನು ನೀಡಲಾಗಿದೆ. ಅದಾಗ್ಯೂ ಮಹಿಳೆಯರು ಪ್ರಸ್ತುತ ಸಮಾಜದಲ್ಲಿ ಎಷ್ಟು ಸುರಕ್ಷಿತರಾಗಿದ್ದಾರೆ ಎಂಬುದನ್ನು ಯೋಚನೆ ಮಾಡಬೇಕಿದೆ. ಈ ನಿಟ್ಟಿನಲ್ಲಿ ಮಹಿಳಾ ದಿನಾಚರಣೆ ಅತ್ಯಂತ ಅಗತ್ಯವಾಗಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪಣ್ಯದಹುಂಡಿ ಪುಟ್ಟೀರಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಬಳಿಕ ಅವರ ಸಾಧನೆಯ ಕುರಿತು ವಿಡಿಯೋ ಮೂಲಕ ವಿದ್ಯಾರ್ಥಿನಿಯರಿಗೆ ತಿಳಿಸಿಕೊಡಲಾಯಿತು.
ಕಾರ್ಯಕ್ರಮದಲ್ಲಿ ಕೊಳ್ಳೇಗಾಲ ಮಹದೇಶ್ವರ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ಎಚ್.ಎಸ್.ಪ್ರೇಮಲತಾ, ಜೆಎಸ್‌ಎಸ್ ಮಹಿಳಾ ಕಾಲೇಜು ಪ್ರಾಂಶುಪಾಲ ಡಾ.ಎನ್.ಮಹದೇವಸ್ವಾಮಿ, ಹಿರಿಯ ವಿದ್ಯಾರ್ಥಿನಿಯರ ಸಂಘದ ಅಧ್ಯಕ್ಷೆ ಕೆ.ಎಸ್.ಸುಮ, ರಾಸಾಯನ ಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಎಂ.ಸೌಮ್ಯ, ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಜಮುನಾ ಹಾಗೂ ಇತರರು ಉಪಸ್ಥಿತರಿದ್ದರು.