

ಮೈಸೂರು: ಮಹಿಳೆಯರ ವೈಯಕ್ತಿಕ ಹಕ್ಕುಗಳನ್ನು ರಕ್ಷಿಸಲು ಹಾಗೂ ಆಸ್ತಿ ಹಕ್ಕು ಪಡೆಯಲು ಹಲವಾರು ಕಾನೂನುಗಳು ಇದ್ದು, ಅವುಗಳನ್ನು ಬಳಸುವ ಸಂದರ್ಭ ಕೌಟುಂಬಿಕ ಸಂಬಂಧಗಳು ಶಿಥಿಲಗೊಳ್ಳದಂತೆ ಎಚ್ಚರ ವಹಿಸುವ ಅವಶ್ಯಕತೆ ಇದೆ ಎಂದು ವಕೀಲೆ ಆರ್. ಸರಸ್ವತಿ ಹೇಳಿದರು.
ರಾಜ್ಯ ಮಾನವಹಕ್ಕುಗಳ ರಕ್ಷಣಾ ಸಮಿತಿ ಮರುಣ ಹೋಬಳಿ ಘಟಕ ನಗರದ ಪುರಭವನದಲ್ಲಿ ಭಾನುವಾರ ಮಹಿಳಾ ದಿನಾಚರಣೆ ಹಾಗೂ ಮಹಿಳೆಯರಿಗೆ ಕಾನೂನು ಅರಿವು ಕಾರ್ಯಕ್ರಮದಲ್ಲಿ ಮಾತನಾಡಿ, ತವರು ಮನೆ ಹಾಗೂ ಪತಿಯ ಮನೆಯ ಆಸ್ತಿಯಲ್ಲಿ ಪಾಲು ಪಡೆಯುವ ಹಕ್ಕನ್ನು ಮಹಿಳೆಯರು ಹೊಂದಿದ್ದಾರೆ. ಯಾವುದೇ ಹಕ್ಕು ಪಡೆಯುವ ಸಂದರ್ಭ ಹಠ ಸರಿಯಲ್ಲ ಎಂದು ಸಲಹೆ ನೀಡಿದರು.
ವಿಧವೆಯನ್ನು ಗಂಡನ ಮನೆಯಿಂದ ಹೊರ ಹಾಕಿದರೆ ಆಸ್ತಿಯಲ್ಲಿ ಪಾಲು ನೀಡುವಂತೆ ಕಾನೂನು ಹೋರಾಟ ನಡೆಸಬಹುದು. ವಿಚ್ಛೇದನ ಪಡೆದರೆ ಗಂಡನಿಂದ ಜೀವನಾಂಶ, ಮಕ್ಕಳ ಬದುಕಿನ ಖರ್ಚುವೆಚ್ಚ ಪಡೆಯಬಹುದು. ಇದಕ್ಕೆ ತಾಲೂಕು ಮತ್ತು ಜಿಲ್ಲಾ ಹಂತದ ನ್ಯಾಯಾಲಯಗಳಲ್ಲಿ ಕಾನೂನು ಸೇವಾ ಸಮಿತಿಯಿಂದ ಉಚಿತ ಕಾನೂನು ಸೇವೆ ದೊರೆಯುತ್ತದೆ ಎಂದು ಹೇಳಿದರು.
ಸಾಧಕಿಯರಾದ ಕಮಲಾ ನಟರಾಜ್, ಲತಾಗೌಡ, ಕೆ. ಸುಧಾಮಣಿ, ಎಂ.ಪಿ. ಪವಿತ್ರಾ, ಮೇರಿ, ಆಯಿಷಾ, ಮಹದೇವಮ್ಮ ಅವರನ್ನು ಸನ್ಮಾನಿಸಲಾಯಿತು. ಸಮಿತಿ ರಾಜ್ಯಾಧ್ಯಕ್ಷೆ ವಿ.ಪಿ.ಸುಶೀಲಾ, ಕೆ.ಆರ್.ಆಸ್ಪತ್ರೆ ತಜ್ಞವೈದ್ಯೆ ಡಾ. ಶೋಭಾ, ವಕೀಲೆ ರುಕ್ಮಿಣಿ ರಾಮಕೃಷ್ಣ, ವಿದ್ಯಾಶ್ರಮ ಶಾಲೆಯ ಸಹಾಯಕ ಪ್ರಾಧ್ಯಾಪಕಿ ಡಾ. ಶಾಲಿನಿ ರವೀಂದ್ರ, ಮಹದೇಶ್ವರ ನರ್ಸಿಂಗ್‌ಹೋಂನ ಡಾ. ಕಲಾವತಿ, ಹೋರಾಟಗಾರ್ತಿ ಸುವರ್ಣಮ್ಮ, ನಿರ್ಮಲಾ ಆಸ್ಪತ್ರೆ ಮುಖ್ಯಸ್ಥೆ ಡಾ. ನಿರ್ಮಲಾ, ರೈತ ಪರ್ವ ಸಂಘಟನೆಯ ಮುಖಂಡ ಉತ್ನಳ್ಳಿ ರವೀಂದ್ರ, ಪ್ರಮುಖರಾದ ಮಂಜುಳಾ ಪುಟ್ಟಸ್ವಾಮಿ, ಮಂಜುಳಾ ಮಂಜುನಾಥ್, ಕಮಲಾ ನಟರಾಜ್ ಹಾಗೂ ಇತರರು ಇದ್ದರು.