

ಹುಮನಾಬಾದ್: ಕೌಶಲಾಭಿವೃದ್ಧಿ ಮತ್ತು ಉದ್ಯಮಶೀಲತೆ ಯೋಜನೆಯಡಿ ಮಹಿಳೆಯರಿಗೆ ಸಿಗುವ ಸೌಲಭ್ಯ, ತರಬೇತಿ ಪಡೆದುಕೊಳ್ಳಬೇಕೆಂದು ಜಿಲ್ಲಾ ಪಂಚಾಯಿತಿ ಯೋಜನಾ ಅಧಿಕಾರಿ ಜಗನ್ನಾಥ ಮೂರ್ತಿ ಹೇಳಿದರು.
ಮಾಣಿಕನಗರದಲ್ಲಿ ಮಂಗಳವಾರ ಮಾಣಿಕ ಪ್ರಭು ಹೋಲಿಗೆ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸರ್ಕಾರವು ಮಹಿಳೆಯರು ಉದ್ಯೋಗಾವಕಾಶಗಳನ್ನು ಕಂಡುಕೊಳ್ಳಲು ಅಗತ್ಯವಿರುವ ಕೌಶಲ ಮತ್ತು ಪರಿಣತಿಯನ್ನು ಪಡೆಯಲು ಸಹಾಯ ಮಾಡುತ್ತಿದ್ದು, ಇದರ ಸದ್ಬಳಕೆ ಮಾಡಿಕೊಂಡು ಆತ್ಮವಿಶ್ವಾಸ ಬೆಳೆಸಿಕೊಳ್ಳಬೇಕೆಂದು ಸಲಹೆ ನೀಡಿದರು.
ತಾಪಂ ಕಾರ್ಯನಿರ್ವಾಹಕ ಅಧಿಕಾರಿ ದೀಪಿಕಾ ನಾಯ್ಕರ್ ಮಾತನಾಡಿ, ಮಹಿಳೆಯರಿಗೆ ಎಲ್ಲ ಕ್ಷೇತ್ರದಲ್ಲಿ ಸರ್ಕಾರ ಮೀಸಲಾತಿ ನೀಡಿದೆ. ಕುಟುಂಬಕ್ಕೆ ಹೆಣ್ಣು ಮಕ್ಕಳು ಬೆಳಕು ಚೆಲ್ಲಿ ಗ್ರಾ ಪಂಗೆ ಹೆಸರು ತರುವಂತೆ ಪ್ರತಿಯೊಂದು ಯೋಜನೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷೆ ಪಂಚಶೀಲ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ನಾಗೇಂದ್ರ ದರಿ, ಜಿಲ್ಲಾ ವ್ಯವಸ್ಥಾಪಕ ಸಂಜುಕುಮಾರ ಚಟ್ನಳ್ಳಿ, ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ದಯಾನಂದ ಹಲಗೆ, ತಾಲೂಕು ವ್ಯವಸ್ಥಾಪಕರಾದ ಅಶ್ವಿನಿ, ಪೂಜಾ, ಒಕ್ಕೂಟದ ಪದಾಧಿಕಾರಿ ಮತ್ತು ಸಂಜೀವಿನಿ ಮತ್ತು ಗ್ರಾಪಂ ಸಿಬ್ಬಂದಿ ಇದ್ದರು.