ಮಹಿಳೆಯರು ಕಾನೂನುಗಳ ಅರಿವು ಹೊಂದಬೇಕು

Published on

ಬಳ್ಳಾರಿ : ಮಹಿಳೆಯರು ಸಮಾಜದಲ್ಲಿ ರಕ್ಷಣೆ ಮತ್ತು ಸಬಲೀಕರಣಕ್ಕಾಗಿ ಸಂವಿಧಾನಾತ್ಮಕ ಬದ್ಧವಾಗಿರುವ ಕಾನೂನು-ಕಾಯ್ದೆಗಳ ಕುರಿತು ಅರಿವು ಹೊಂದಬೇಕು ಎಂದು ಜಿಲ್ಲಾ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶ ಸಿದ್ಧಲಿಂಗ ಪ್ರಭು ಹೇಳಿದರು.
ನಗರದ ಜಿಪಂ ಸಭಾಂಗಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ, ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ. ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ವಿಧಾನ್ ಸೇ ಸಮಾಧಾನ್ ಅಭಿಯಾನ ಅಂಗವಾಗಿ ಶನಿವಾರ ಆಯೋಜಿಸಿದ್ದ ಮಹಿಳೆಯರಿಗಾಗಿ ಕಾನೂನು ಅರಿವು ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು. ಪ್ರಸ್ತುತ ದಿನಮಾನಗಳಲ್ಲಿ ಮಹಿಳೆಯರು ಶಿಕ್ಷಣ, ಉದ್ಯೋಗ, ರಾಜಕೀಯ ಹಾಗೂ ಅಭಿವೃದ್ಧಿ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ಸಮಾನತೆ ಸಾಧಿಸುತ್ತಿದ್ದು ಒಂದೆಡೆ ಸಂತಸವಾದರೆ, ಮತ್ತೊಂದೆಡೆ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರ, ವರದಕ್ಷಿಣೆ ಕಿರುಕುಳ ಪ್ರಕರಣಗಳು ಕಂಡು ಬರುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು. ಪೋಷಕರು ತಮ್ಮ ಮಕ್ಕಳು ತಪ್ಪು ಹಾದಿ ಹಿಡಿಯದಂತೆ ನೋಡಿಕೊಂಡು, ಅವರ ಚಲನ-ವಲನ ಬಗ್ಗೆ ಗಮನಹರಿಸಬೇಕು. ವಿವಾಹ ವಿಷಯ ಪ್ರಸ್ತಾವನೆ ಬಂದಾಗ ಆರ್ಥಿಕ ಸ್ಥಿತಿಗತಿಗೆ ತಕ್ಕಂತೆ ಮದುವೆ ಮಾಡಿದಾಗ, ಎರಡು ಸಂಬಂಧಗಳ ನಡುವೆ ಬಿರುಕು ಮೂಡುವುದಿಲ್ಲ. ಇದರಿಂದ ವರದಕ್ಷಿಣೆ ಕಿರುಕುಳ ಮತ್ತು ಕೌಟುಂಬಿಕ ಕಲಹ ಉದ್ಭವವಾಗುವುದಿಲ್ಲ ಎಂದು ಅಭಿಪ್ರಾಯಪಟ್ಟರು.
ಹಿರಿಯ ಸಿವಿಲ್ ನ್ಯಾಯಾಧೀಶ ರಾಜೇಶ್ ಎನ್. ಹೊಸಮನೆ ಮಾತನಾಡಿ, ಪ್ರತಿಯೊಬ್ಬರೂ ಕಾನೂನಿನ ಜ್ಞಾನ ಪಡೆದುಕೊಂಡು ಸಣ್ಣಪುಟ್ಟ ವಿವಾದಗಳಿಗೆ ಕೋರ್ಟ್-ಕಚೇರಿ, ಪೊಲೀಸ್ ಠಾಣೆಗಳಿಗೆ ವ್ಯಾಜ್ಯಗಳನ್ನು ಕೊಂಡೊಯ್ಯದೇ ಅನ್ಯೋನ್ಯವಾಗಿ ಜೀವನ ನಡೆಸಬೇಕು ಎಂದು ಕಿವಿಮಾತು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ವಿಜಯಲಕ್ಷ್ಮೀ ಮೈದೂರು ವಿಶೇಷ ಉಪನ್ಯಾಸ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net