

ಹಾಸನ: ಯುವತಿಯರು ಹಾಗೂ ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವ ಅಗತ್ಯ ಇದೆ. ಇತ್ತೀಚಿನ ದಿನಗಳಲ್ಲಿ ತಮ್ಮ ಕೆಲಸದ ಒತ್ತಡದಿಂದ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರುತ್ತಿದ್ದಾರೆ. ಇದರಿಂದ ಅನೇಕ ಮಹಿಳೆಯರು ಪ್ರಾಣವನ್ನೇ ಕಳೆದುಕೊಳ್ಳುವ ಪ್ರಕರಣಗಗಳು ಕಂಡು ಬಂದಿವೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಮಹಾಲಿಂಗಯ್ಯ ಹೇಳಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಸೋಮವಾರ ಹದಿ ಹರೆಯದವರ ಆರೋಗ್ಯ ಸಮಿತಿ ಹಾಗೂ ಹಾಸನದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ಹದಿಹರೆಯದ ಹೆಣ್ಣುಮಕ್ಕಳಿಗೆ ಮುಟ್ಟಿನ ಆರೋಗ್ಯ ಹಾಗೂ ನೈರ್ಮಲ್ಯದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿನಿಯರ ಸಮಸ್ಯೆಗಳನ್ನು ಅರಿತಿರುವ ಸರ್ಕಾರ ಶಾಲಾ ಕಾಲೇಜುಗಳಲ್ಲಿ ಸ್ಯಾನಿಟರಿ ಪ್ಯಾಡ್ ವಿತರಿಸುವ ಮೂಲಕ ಅವರಿಗೆ ಅನುಕೂಲ ಕಲ್ಪಿಸಿದೆ. ಅವುಗಳ ಸದುಪಯೋಗ ಪಡಿಸಿಕೊಳ್ಳುವಂತೆ ಮನವಿ ಮಾಡಿದರು.
ಸ್ತ್ರೀ ರೋಗ ತಜ್ಞರ ಸಂಘದ ಅಧ್ಯಕ್ಷರಾದ ಡಾ. ಭಾರತೀ ರಾಜಶೇಖರ್ ಮಾತನಾಡಿ, ಹೆಣ್ಣು ಮಕ್ಕಳು ಋತುಸ್ರಾವದ ವೇಳೆ ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು. ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ತೋರಿದರೆ ಮುಂದಿನ ದಿನಗಳಲ್ಲಿ ಬಹುದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಪ್ರತಿದಿನ ಹೆಣ್ಣು ಮಕ್ಕಳು ಬಳಸಿಸುವ ಸ್ಯಾನಿಟರಿ ಪ್ಯಾಡ್‌ಗಳನ್ನು ಎಲ್ಲೆಂದರಲ್ಲಿ ಬಿಸಾಡಿದರೆ ಪರಿಸರ ಮಾಲಿನ್ಯಕ್ಕೆ ಕಾರಣ ಆಗಲಿದೆ. ಆದ್ದರಿಂದ ತಾವು ಬಳಸುವ ಪ್ಯಾಡ್ ಹಾಗೂ ಇನ್ನಿತರ ವಸ್ತುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಕೆಲವರು ತಮ್ಮ ಸ್ಯಾನಿಟರಿ ಪ್ಯಾಡ್‌ಗಳನ್ನು ಬೆಂಕಿಯಲ್ಲಿ ಸುಟ್ಟು ಹಾಕುವ ಕೆಲಸ ಮಾಡುತ್ತಿದ್ದಾರೆ. ಇದು ಕೂಡ ಪರಿಸರಕ್ಕೆ ಮಾರಕವಾದ ಬೆಳವಣಿಗೆ. ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ನಾವು ಬಳಸುವ ವಸ್ತುಗಳನ್ನು ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಪ್ರತಿ ಋತುಸ್ರಾವದ ವೇಳೆ ಹೆಚ್ಚಿನ ರಕ್ತಸ್ರಾವ ಆಗುವ ಕಾರಣ ಜಾಗೃತಿ ವಹಿಸುವ ಅಗತ್ಯ ಇದೆ. ಮುಖ್ಯವಾಗಿ ಪ್ಲಾಸ್ಟಿಕ್ ಸಹಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಅದರಿಂದ ದೇಹದ ಜತೆಗೆ ಪರಿಸರದ ಮೇಲೆ ಅನೇಕ ದುಷ್ಪರಿಣಾಮಗಳು ಬೀರಲಿವೆ ಎಂದರು.
ಕಾರ್ಯಕ್ರಮದಲ್ಲಿ ಪ್ರಸೂತಿ ಮತ್ತು ಸ್ತ್ರೀ ರೋಗ ತಜ್ಞರ ಸಂಘದ ಡಾ. ಸೌಮ್ಯಾ ಮಣಿ, ಡಾ.ರಂಗಲಕ್ಷ್ಮೀ, ಡಾ.ಗಿರಿಜಾ, ಡಾ. ಸುಷ್ಮಾ, ಡಾ. ಸಾವಿತ್ರಿ, ಸೇರಿದಂತೆ ಇತರರು ಇದ್ದರು.