

ಮೈಸೂರು: ಮಹಿಳೆಯರು ಉನ್ನತ ಹುದ್ದೆ ಪಡೆದು ತಮ್ಮ ಜೀವನವನ್ನು ಕಟ್ಟಿಕೊಳ್ಳಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಸಚಿವೆ ಎಂ.ಕೆ.ಸವಿತಾ ಹೇಳಿದರು.
ಮೈಸೂರಿನ ದಿ ಇನ್‌ಸ್ಟಿಟ್ಯೂಟ್ ಆಫ್ ಎಜುಕೇಷನ್ ಓಂಕರ್‌ಮಲ್ ಸೋಮಾನಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ ಮಹಿಳಾ ದಿನಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
ಮಹಿಳಾ ಸುರಕ್ಷತೆ, ಮಹಿಳಾ ಆರೋಗ್ಯ, ಮಹಿಳಾ ಸಬಲೀಕರಣ ಮುಖ್ಯವಾಗಿದ್ದು, ಮಹಿಳೆಯರು ಸಮಗ್ರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು. ಮೌಲ್ಯಯುತವಾದ ಜೀವನ ನಡೆಸಬೇಕು ಎಂದು ಸಲಹೆ ನೀಡಿದರು.
ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಪಿ.ಗೀತಾಂಜಲಿ ಮಾತನಾಡಿ, ಮಹಿಳೆಯರು ಅಡೆತಡೆಗಳಿಂದ ಮುನ್ನುಗ್ಗಿ ಸಾಧಕಿಯರಾಗಬೇಕು. ಮಹಿಳೆ ಸ್ವಾಭಿಮಾನದಿಂದ ಬದುಕುವ ಛಲ ಮತ್ತು ಕೌಶಲ ರೂಢಿಸಿಕೊಂಡು ಸಮಾಜದಲ್ಲಿ ಸುಸ್ಥಿರ ಅಭಿವೃದ್ಧಿಗೆ ಕಾರಣವಾಗಲಿ ಎಂದು ಆಶಿಸಿದರು.
ಸಂಸ್ಥೆಯ ಅಧ್ಯಕ್ಷ ಡಾ.ಎಂ.ಪುಟ್ಟಸ್ವಾಮಿ ಮಾತನಾಡಿ, ಮಹಿಳೆಯನ್ನು ಗೌರವಿಸಿದರೆ, ದೇವರಂತೆ ಪೂಜಿಸಿದಂತೆ. ಎಲ್ಲ ಹೆಣ್ಣು ಮಕ್ಕಳು ಸದೃಢರಾಗಿ, ಸಮಾಜದಲ್ಲಿ ಸ್ವಾವಲಂಬಿಯಾಗಿ ಬದುಕಬೇಕು ಎಂದರು.
ಪ್ರಾಂಶುಪಾಲೆ ಡಾ.ಆರ್.ಜಿ.ಉಷಾ ಮಾತನಾಡಿ, ಮಹಿಳೆ ಅಬಲೆಯಲ್ಲ ಸಬಲೆ. ಅವರ ರಕ್ಷಣೆಗೆ ಇರುವ ಕಾನೂನುಗಳು ಹಾಗೂ ಸಮಾಜದಲ್ಲಿನ ಅವಕಾಶ ಸದುಪಯೋಗಪಡಿಸಿಕೊಂಡು ಸಮಾಜದ ಬೆಳಕಾಗಿ ಹೊರ ಹೊಮ್ಮಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಹೇಳಿದರು
ನರೇಂದ್ರ ಹಾಗೂ ನೇತಾಜಿ ಜನ್ಮದಿನದ ಪ್ರಯುಕ್ತ ಅಯೋಜಿಸಿದ್ದ ಪ್ರಬಂಧ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮದ ಸಂಯೋಜಕ ರಾಜೀವ್ ಶರ್ಮ, ಸಹ ಪ್ರಾಧ್ಯಾಪಕರಾದ ಸಂಜಯ್ ಬಗಾಡೆಕರ್, ಡಾ.ವಿನುತಾ, ಕೆನೆತ್ ಕೆಲ್ವಿನ, ಕೆ.ಆರ್.ಪವಿತ್ರಾ ಇದ್ದರು.