ಮಹಿಳೆಯರು ಉದ್ಯಮ ಸ್ಥಾಪಿಸಿ ಸ್ವಾವಲಂಬಿಗಳಾಗಿ

mysore
Published on

ಮೈಸೂರು: ಬ್ಯಾಂಕ್‌ಗಳು ನೀಡುವ ಆರ್ಥಿಕ ನೆರವಿನಿಂದ ಮಹಿಳೆಯರು ಉದ್ಯಮ ಸ್ಥಾಪನೆ ಮಾಡಿ ಸ್ವಾವಲಂಬಿಗಳಾಗಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಕೆ.ಎಂ.ಗಾಯತ್ರಿ ಹೇಳಿದರು.

ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ವತಿಯಿಂದ ಜಿಪಂ ಡಿ.ದೇವರಾಜ ಅರಸು ಸಭಾಂಗಣದಲ್ಲಿ ಮಹಿಳಾ ಸಂಘಗಳ ಸದಸ್ಯರಿಗೆ, ಬ್ಯಾಂಕ್ ಪ್ರತಿನಿಧಿಗಳಿಗೆ ಗುರುವಾರ ಆಯೋಜಿಸಿದ್ದ ‘ಸಾಲ ಸಂಪರ್ಕ ಮತ್ತು ಉದ್ಯಮ ಹಣಕಾಸು’ ಕಾರ್ಯಾಗಾರದಲ್ಲಿ ಮಾತನಾಡಿದರು.

ಮಹಿಳಾ ಶಕ್ತಿಯನ್ನು ಸಬಲೀಕರಣಗೊಳಿಸಿ ಆರ್ಥಿಕವಾಗಿ ಪ್ರತಿಯೊಬ್ಬ ಮಹಿಳೆಯರು ಅಭಿವೃದ್ಧಿಯಾಗಬೇಕು ಎಂಬುದು ಈ ಕಾರ್ಯಾಗಾರದ ಉದ್ದೇಶ. ಮಹಿಳೆಯರು ಕೇವಲ ಮನೆ ಕೆಲಸಗಳಿಗೆ ಸೀಮಿತವಾಗಿರದೆ, ಅವರು ಕೂಡ ದೊಡ್ಡ ಶಕ್ತಿಯಾಗಿ ಬೆಳೆಯಬೇಕು ಎಂಬುದು ಗಾಂಧೀಜಿ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯವಾಗಿತ್ತು ಎಂದು ತಿಳಿಸಿದರು.

ಸರ್ಕಾರ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿದೆ. ಅದರ ಸದುಪಯೋಗವನ್ನು ಪ್ರತಿಯೊಬ್ಬ ಮಹಿಳೆಯರು ಪಡೆದುಕೊಂಡು ತಮ್ಮ ಸ್ವಂತ ಶಕ್ತಿಯಿಂದ ಆರ್ಥಿಕವಾಗಿ ಸಬಲೀಕರಣವಾಗಬೇಕು ಎಂದರು.

ಮಹಿಳಾ ಶಕ್ತಿಗಳನ್ನು ಯಾವ ರೀತಿಯಾಗಿ ನಾವು ಸ್ವಾವಲಂಬಿಯಾಗಿ ಮಾಡಬೇಕು, ಅವರಲ್ಲಿ ಇರುವಂತಹ ಜ್ಞಾನವನ್ನು ಯಾವ ರೀತಿ ಪೋತ್ಸಾಹ ನೀಡಬೇಕು, ಸ್ಥಳೀಯ ಪ್ರದೇಶಗಳಲ್ಲಿ ಸಿಗುವಂತಹ ಕಚ್ಚಾ ಪದಾರ್ಥಗಳಿಂದ ಸಣ್ಣ ಉದ್ಯಮವನ್ನು ಹೇಗೆ ದೊಡ್ಡ ಉದ್ಯಮವಾಗಿ ಮಾಡಬಹುದು. ವೈಯಕ್ತಿಕವಾಗಿ ಅಥವಾ ಗುಂಪು ಚಟುವಟಿಕೆ ಮಾಡುವುದರ ಮೂಲಕ ಹೇಗೆ ಉದ್ಯಮ ಮಾಡಬಹುದು ಎಂಬುದರ ಕುರಿತು ಅನೇಕ ಸಂಜೀವಿನಿ ಕಾರ್ಯಕ್ರಮದಲ್ಲಿ ತಿಳಿಸಿಕೊಡಲಾಗುತ್ತದೆ ಎಂದರು.

ಬ್ಯಾಂಕ್ ವ್ಯವಹಾರವನ್ನು ಹೇಗೆ ಮಾಡಬೇಕು, ಉದ್ಯಮ ಹಣಕಾಸಿನ ವ್ಯವಹಾರ ಯಾವ ರೀತಿ ಮಾಡಬೇಕು, ಬ್ಯಾಂಕ್‌ನೊಂದಿಗೆ ಯಾವ ರೀತಿ ಒಡನಾಟ ಇಟ್ಟುಕೊಂಡು ವ್ಯವಹಾರ ಮಾಡಬೇಕು.

ಬ್ಯಾಂಕ್‌ಗಳು ಯಾವ ರೀತಿ ಸಹಕಾರಿಯಾಗಿದೆ. ಯಾವ ಯೋಜನೆಗಳ ಮೂಲಕ ಯಾವ ಯಾವ ಲೋನ್‌ಗಳನ್ನು ಪಡೆದುಕೊಳ್ಳಬಹುದು ಎಂಬುದು ಕಾರ್ಯಾಗಾರದ ಚರ್ಚೆಯ ವಿಚಾರವಾಗಿದೆ. ಇದರ ಸದುಪಯೋಗವನ್ನು ಮಹಿಳೆಯರು ಪಡೆದುಕೊಳ್ಳಬೇಕು ಎಂದು ಹೇಳಿದರು.

ಉದ್ಯಮವನ್ನು ಪ್ರಾರಂಭ ಮಾಡಲು ಅಗತ್ಯ ಇರುವಂತಹ ಮೂಲ ಹಣಕಾಸಿನ ವ್ಯವಸ್ಥೆಯನ್ನು ಸಾಲದ ರೂಪದಲ್ಲಿ ಬ್ಯಾಂಕ್‌ಗಳಿಂದ ಪಡೆದುಕೊಳ್ಳಬೇಕು ಎಂದರು. ರಾಜ್ಯ ಸಂಪನ್ಮೂಲ ವ್ಯಕಿ ರಾಮಕೃಷ್ಣ ಮಾನೆ ಮಾತನಾಡಿದರು.

ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ನಾಗೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಕೆ.ಬಿ.ಪ್ರಭುಸ್ವಾಮಿ, ಪಿರಿಯಾಪಟ್ಟಣದ ಶಿಶು ಸಮಗ್ರ ಅಭಿವೃದ್ಧಿ ಯೋಜನಾಧಿಕಾರಿ ಮಮತಾ ಸೇರಿದಂತೆ ವಿವಿಧ ಬ್ಯಾಂಕ್‌ಗಳ ಮ್ಯಾನೇಜರ್‌ಗಳು ಹಾಗೂ ಬ್ಯಾಂಕ್ ಸಿಬ್ಬಂದಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net