

ಕೆ.ಎಂ.ದೊಡ್ಡಿ: ಗ್ರಾಮೀಣ ಮಹಿಳೆಯರು ಸ್ವಯಂ ಉದ್ಯೋಗ ಕೈಗೊಳ್ಳುವ ಮೂಲಕ ಆರ್ಥಿಕವಾಗಿ ಸಬಲರಾಗಬಹುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಆನಂದ್ ತಿಳಿಸಿದರು.
ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೋಮವಾರ ರೋಟರಿ ಸೆಂಟ್ರಲ್ ಭಾರತೀನಗರ ಹಾಗೂ ರೂಪಶ್ರೀ ಟ್ರೈನಿಂಗ್ ಇನ್‌ಸ್ಟಿಟ್ಯೂಟ್ ವತಿಯಿಂದ ಆಯೋಜಿಸಿದ್ದ ಬ್ಯೂಟಿ ಪಾರ್ಲರ್ ಮತ್ತು ಟೈಲರಿಂಗ್ ಉಚಿತ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡರೆ ಆರ್ಥಿಕ ಪ್ರಗತಿ ಸಾಧಿಸಬಹುದು ಎಂದು ಹೇಳಿದರು.
ಸ್ವಸಹಾಯ ಸಂಘಗಳ ಮೂಲಕ ಮಹಿಳೆಯರಿಗೆ ಆದಾಯ ತಂದುಕೊಂಡುವಂತಹ ಟೈಲರಿಂಗ್ ಸೇರಿದಂತೆ ಸ್ವಯಂ ಉದ್ಯೋಗಗಳ ತರಬೇತಿ ಪಡೆದುಕೊಳ್ಳಬೇಕು. ಮಹಿಳೆಯರಿಗೆ ಬ್ಯೂಟಿಷಿಯನ್ ಕ್ಷೇತ್ರದಲ್ಲಿ ಸ್ವಯಂ ಉದ್ಯೋಗ ಆರಂಭಿಸಲು, ಉದ್ಯಮಿಗಳಾಗಲು ಸಾಕಷ್ಟು ಅವಕಾಶಗಳಿವೆ. ಮಹಿಳೆಯರು ಇಂತಹ ತರಬೇತಿಗಳ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.
ಜಿಪಂ ಮಾಜಿ ಸದಸ್ಯ ಕೆ.ಕುಮಾರರಾಜು, ರೋಟರಿ ಸೆಂಟ್ರಲ್ ಅಧ್ಯಕ್ಷ ದೇವರಹಳ್ಳಿ ಸಾಧು ನಂದೀಶ್, ಡಾ.ಸೌಮ್ಯಾ, ಪದಾಧಿಕಾರಿಗಳಾದ ಭೈರೇಗೌಡ, ದೇವರಹಳ್ಳಿ ಶಿವರಾಮೇಗೌಡ, ಮಧುಸೂದನ್, ಕಾರ್ಕಹಳ್ಳಿ ಸಿದ್ದೇಗೌಡ, ಶೋಭಾ, ವಿಜಯಲಕ್ಷ್ಮೀ ಮತ್ತಿತರರು ಇದ್ದರು.