

ಬಾಳೆಹೊನ್ನೂರು: ಮಹಿಳೆಯರಿಗೆ ಸಮಾನ ಹಕ್ಕು ಕೊಟ್ಟವರು ಡಾ. ಬಿ.ಆರ್.ಅಂಬೇಡ್ಕರ್ ಎಂದು ಕರ್ನಾಟಕ ದಲಿತ ಮಹಿಳಾ ಒಕ್ಕೂಟದ ರಾಜ್ಯ ಸಂಘಟನಾ ಸಂಚಾಲಕಿ ಎಂ.ವಿ.ಭವಾನಿ ಹೇಳಿದರು.
ಜೇಸಿ ವೃತ್ತದಲ್ಲಿ ವಿವಿಧ ಸಂಘಟನೆಗಳು ಶುಕ್ರವಾರ ಆಯೋಜಿಸಿದ್ದ ಡಾ. ಬಿ.ಆರ್.ಅಂಬೇಡ್ಕರ್ ಪರಿನಿಬ್ಬಾಣ ದಿನಾಚರಣೆಯಲ್ಲಿ ಮಾತನಾಡಿ, ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಆಗಿದ್ದರೂ ಅದನ್ನು ಜಾರಿ ಮಾಡುವವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ದಲಿತರಿಗೆ ರಕ್ಷಣೆ ನೀಡುವವರೇ ದಲಿತರ ವಿರುದ್ಧ ಅರ್ಧ ರಾತ್ರಿಯಲ್ಲಿ ಕೇಸು ದಾಖಲಿಸುತ್ತಿದ್ದಾರೆ. ಇಂಥ ಅಧಿಕಾರಿಗಳ ವಿರುದ್ಧ ಜಿಲ್ಲಾಮಟ್ಟದಲ್ಲಿ ಚಳವಳಿಗಳನ್ನು ಮಾಡಿ ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಬೇಕು ಎಂದರು.
ಮಹಾಮಾನವತಾವಾದಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಎಳೆದುತಂದಿರುವ ವಿಮೋಚನಾ ರಥವನ್ನು ನಾವೆಲ್ಲರೂ ಮುಂದಕ್ಕೆ ಕೊಂಡೊಯ್ದು ಅವರ ಆದರ್ಶಗಳನ್ನು ಪಾಲಿಸಬೇಕಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕ ಸುಬ್ರಹ್ಮಣ್ಯ ಮಾತನಾಡಿ, ಅಂಬೇಡ್ಕರ್ ಶ್ರೇಷ್ಠ ಸಂವಿಧಾನ ನೀಡಿದ್ದಾರೆ. ಅಂಥ ಸಂವಿಧಾನವನ್ನು ಒಪ್ಪದವರು ದೇಶದಲ್ಲಿ ಇರಲು ಅರ್ಹರಲ್ಲ ಎಂದರು.
ಡಿಎಸ್‌ಎಸ್ ತಾಲೂಕು ಸಂಘಟನಾ ಸಂಚಾಲಕ ಸುನೀಲ್, ಮಹಿಳಾ ಬಂಧುತ್ವ ವೇದಿಕೆ ತಾಲೂಕು ಸಂಚಾಲಕಿ ಅಂಬುಜಾ, ಸವಿತಾ, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ ಉಮೇಶ್ ಇತರರಿದ್ದರು.