ಮಹಿಳೆಯರಿಗೆ ಸಮಾನ ಅವಕಾಶ ದೊರೆಯಲಿ

10ss1sanmanitaru
Published on

ಶನಿವಾರಸಂತೆ: ಮಹಿಳೆಯರಿಗೆ ಸಮಾನ ಅವಕಾಶ ದೊರೆತರೆ ಎಲ್ಲ ಕ್ಷೇತ್ರದಲ್ಲೂ ಮತ್ತಷ್ಟು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಬಿ.ವಿ.ಜಯಣ್ಣ ಅಭಿಪ್ರಾಯಪಟ್ಟರು.


ತಾಲೂಕು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಸೋಮವಾರಪೇಟೆ ಚನ್ನಬಸಪ್ಪ ಸಭಾಂಗಣದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಶುಕ್ರವಾರ ತಾಲೂಕಿನ ಮಹಿಳಾ ಪಿಡಿಒಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದು ಮಹಿಳೆಯರು ಪ್ರತಿಯೊಂದು ಕ್ಷೇತ್ರದಲ್ಲೂ ದುಡಿಯುತ್ತಿದ್ದು, ಈ ನಿಟ್ಟಿನಲ್ಲಿ ಎಲ್ಲ ಕ್ಷೇತ್ರದಲ್ಲೂ ಮಹಿಳೆಯರಿಗೆ ಸಮಾನ ಅವಕಾಶ ನೀಡಿದಲ್ಲಿ ಪುರಷರಿಗೆ ಸರಿ ಸಮಾನರಾಗಿ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದರು.


ಸೋಮವಾರಪೇಟೆಯ ಕವಯಿತ್ರಿ ರಾಣಿ ರವೀಂದ್ರ ಮಾತನಾಡಿ, ಯೂರೋಪ್‌ನಲ್ಲಿ ಸಮಾನ ವೇತನಕ್ಕಾಗಿ ನಡೆದ ಹೋರಾಟವು ಮಹಿಳೆಯರಿಗೆ ಪ್ರೇರಣೆಯಾದ ನಂತರದ ದಿನಗಳಲ್ಲಿ ವಿಶ್ವಸಂಸ್ಥೆ ಮಹಿಳೆಯರಿಗೆ ಸಮಾಜದಲ್ಲಿ ಹೆಚ್ಚಿನ ಸ್ಥಾನಮಾನ ನೀಡಲು, ಮಹಿಳೆಯರ ಮೇಲಿನ ಶೋಷಣೆಯನ್ನು ತಡೆಗಟ್ಟಲು ಹಾಗೂ ಮಹಿಳೆಯರಿಗೆ ಸಮಾನ ಅವಕಾಶ ಕಲ್ಪಿಸಿಕೊಡುವ ಉದ್ದೇಶದಿಂದ ಮಾ.8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಮೀಸಲಿಟ್ಟಿದೆ ಎಂದರು.
ಎಲ್ಲ ಕ್ಷೇತ್ರದಲ್ಲೂ ಪುರುಷರಿಗೆ ಸರಿ ಸಮಾನರಾಗಿ ದುಡಿಯುತ್ತಿದ್ದು, ಅದರಲ್ಲೂ ಗ್ರಾ.ಪಂ. ಪಿಡಿಒ ಗಳಾಗಿ ಸಾಧನೆ ಮಾಡಿರುವ ಮಹಿಳೆಯರನ್ನು ಗುರುತಿಸಿ ಸನ್ಮಾನ ಮಾಡುತ್ತಿರುವ ತಾ.ಪಂ.ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾವೃದ್ಧಿ ಸಂಘದ ಕಾರ್ಯ ಶ್ಲಾಘನೀಯ ಎಂದರು.


ತಾ.ಪಂ.ಅಭಿವೃದ್ಧಿ ಅಧಿಕಾರಿಗಳ ತಾಲೂಕು ಸಂಘದ ಅಧ್ಯಕ್ಷ ಎಚ್.ಡಿ.ಹರೀಶ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ಎಲ್ಲ ಪದಾಧಿಕಾರಿಗಳ ಸಹಕಾರದ ಮೂಲಕ ಸಾಧನೆ ಮಾಡುತ್ತಿರುವ ಮಹಿಳಾ ಉದ್ಯೋಗಿಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನು ಹೆಚ್ಚಿನ ಸಾಮಾಜಿಕ ಕಳಕಳಿ ಹೊಂದುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.


ಸನ್ಮಾನ: ವಿವಿಧ ಗ್ರಾ.ಪಂ.ಗಳ ಪಿಡಿಒಗಳಾದ ಕಾವೇರಿ, ರಾಣಿ ರವೀಂದ್ರ, ವೀಣಾ, ಆಯೇಷ, ಅಸ್ಮ, ಲಿಖಿತಾ, ಮಂಜುಳಾ, ಸ್ಮಿತಾ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಂಘದ ಅಧ್ಯಕ್ಷ ರವೀಶ್ ಮಾತನಾಡಿದರು. ಸಮಾರಂಭದಲ್ಲಿ ಪೂರ್ಣಕುಮಾರ್, ಎಚ್.ಎಸ್.ಹರೀಶ್, ರವಿ ಕೆ.ನಾಯಕ್, ರಜನಿ ಮುಂತಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net