ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಯಾಗಲಿ: ಯು.ಟಿ.ಖಾದರ್

mysore
Published on

ಮೈಸೂರು: ಲೋಕಸಭಾ, ದೇಶದ ಎಲ್ಲ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಜಾರಿಯಾಗಬೇಕು ಎಂದು ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ಗೋಕುಲಂನ ವಿದ್ಯಾವರ್ಧಕ ಇಂಜಿನಿಯರಿಂಗ್ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಲ್ಲ ಕ್ಷೇತ್ರಗಳಲ್ಲೂ ಮುಂದುವರಿದ ಅಮೆರಿಕಾದಲ್ಲಿ ಈ ವರೆಗೆ ಮಹಿಳಾ ಅಧ್ಯಕ್ಷರು ಆಗಿಲ್ಲ. ಆದರೆ, ಭಾರತದಲ್ಲಿ ಇದು ಕಾರ್ಯರೂಪಕ್ಕೆ ಬಂದಿದೆ. ಇಂದಿರಾ ಗಾಂಧಿ ಅವರು ಜನರಿಂದ ಆಯ್ಕೆಯಾಗಿ ದೇಶದ ಮೊದಲ ಪ್ರಧಾನಿಯಾಗಿ ದೇಶವನ್ನು ಸಮರ್ಥವಾಗಿ ಮುನ್ನೆಡೆಸಿದ್ದಾರೆ. ಆದ್ದರಿಂದ ಮಹಿಳಾ ಮೀಸಲಾತಿ ಜಾರಿಯಾದರೆ ಯಾವುದೇ ಸಮಸ್ಯೆಯಾಗುವುದಿಲ್ಲ. ಬದಲಿಗೆ ದೇಶಕ್ಕೆ ಒಳ್ಳೆಯದಾಗಲಿದೆ ಎಂದರು.

ಸಮಾಜವು ಮಹಿಳೆಯರಿಗೆ ಆತ್ಮವಿಶ್ವಾಸವನ್ನು ತುಂಬಿದರೆ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯವಾಗುತ್ತದೆ. ನಾಯಕತ್ವ ಗುಣ ಹೆಣ್ಣು ಮಕ್ಕಳಿಗೆ ಹುಟ್ಟಿನಿಂದಲೇ ಬರುತ್ತದೆ. ಪುರುಷರಿಗೆ ಸತತ ಪ್ರಯತ್ನ ಬಳಿಕ ಈ ಗುಣ ಒಲಿಯುತ್ತದೆ.

ಮನೆಯ ನಿರ್ವಹಣೆಯೇ ಅವಳಿಗೆ ಆ ಗುಣವನ್ನು ಕಲಿಸಿಕೊಡುತ್ತದೆ. ಆದ್ದರಿಂದ ಮಹಿಳೆಯರಿಗೆ ಪ್ರೋತ್ಸಾಹ, ಆತ್ಮವಿಶ್ವಾಸ ತುಂಬಿದರೆ ಸಮಾಜದ ಉನ್ನತ ಸ್ಥಾನಕ್ಕೆ ಏರಲು ಅನುಕೂಲವಾಗುತ್ತದೆ. ಮಹಿಳೆಯರಿಗೆ ಕೊಟ್ಟ ಅವಕಾಶಗಳನ್ನು ಸದ್ಬಳಕೆ ಮಾಡಿಕೊಂಡಿರುವ ಬಹಳಷ್ಟು ನಿದರ್ಶನಗಳು ದೊರೆಯುತ್ತವೆ ಎಂದರು.

ಭೂಮಿಯೇ ಸ್ವರ್ಗ. ಆದರೆ, ಅದನ್ನು ನರಕ ಮಾಡಲಾಗುತ್ತಿದೆ. ಪ್ರೀತಿ-ಸ್ನೇಹದಿಂದ ಸ್ವರ್ಗ ಸೃಷ್ಟಿಸಬೇಕಿದೆ. ಪ್ರತಿಯೊಬ್ಬರು ಸಮಾಜ ಕಟ್ಟುವುದರೊಂದಿಗೆ ಸಮಾಜ ಜೋಡಿಸುವ ಕೆಲಸವನ್ನೂ ಮಾಡಬೇಕಿದೆ ಎಂದರು.

ಇಸ್ರೋ ನಿವೃತ್ತ ವಿಜ್ಞಾನಿ ಟಿ.ಕೆ.ಅನುರಾಧಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಭಾರತವು ಆರ್ಥಿಕತೆಯಲ್ಲಿ ಮುಂದೆ ಬರಲು ಮಹಿಳೆಯರು ನಾಯಕತ್ವ ತೆಗೆದುಕೊಳ್ಳಬೇಕು. ಆದರೆ, ಪೂರ್ಣಪ್ರಮಾಣದಲ್ಲಿ ಮಹಿಳಾ ಸಹಭಾಗಿತ್ವಕ್ಕಾಗಿ ನೀತಿ-ನಿಯಮಗಳಲ್ಲಿರುವ ವ್ಯತ್ಯಾಸವನ್ನು ಸರಿಪಡಿಸಬೇಕಿದೆ ಎಂದರು.

ಈಗಿರುವ ಸಂವಿಧಾನದಲ್ಲಿ ಕೆಲ ನೀತಿ-ನಿಯಮಗಳು ಮಹಿಳೆಯರಿಗೆ ಪೂರಕವಾಗಿಲ್ಲ. ಇದು ಸರಿಯಾಗಬೇಕು. ಎಲ್ಲ ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಉತ್ತಮ ವಾತಾವರಣ ಸೃಷ್ಟಿಸಬೇಕು. ಹೆರಿಗೆ, ಗರ್ಭಿಣಿಯಂತಹ ಸನ್ನಿವೇಶದಲ್ಲಿ ಮಹಿಳೆಯರಿಗೆ ರಜೆ ಸೇರಿದಂತೆ ಇನ್ನಿತರ ಸೌಲಭ್ಯ ಕಲ್ಪಿಸಿಕೊಡಬೇಕು. ಕೆಲಸದಲ್ಲಿ ಪ್ರೋತ್ಸಾಹದೊಂದಿಗೆ ತರಬೇತಿಯನ್ನು ನೀಡಬೇಕು ಎಂದು ಸಲಹೆ ನೀಡಿದರು.

ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ, ಮಾಜಿ ಸಚಿವ ಪಿಜಿಆರ್ ಸಿಂಧ್ಯ, ಆಯುಕ್ತ ಎಂ.ಎ.ಖಾಲಿದ್, ರಾಜ್ಯ ಕೋಶಾಧಿಕಾರಿ ಟಿ.ಪ್ರಭಾಕರ್, ಕಾರ್ಯದರ್ಶಿ ಕೆ.ಗಂಗಪ್ಪಗೌಡ, ಸಹಾಯಕ ರಾಜ್ಯ ಆಯುಕ್ತ ಬಿ.ಕೆ.ಬಸವರಾಜ, ಉಪಾಧ್ಯಕ್ಷ ಪುಷ್ಪವಲ್ಲಿ ಸೇರಿದಂತೆ ಇನ್ನಿತರರಿದ್ದರು

*13

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ವತಿಯಿಂದ ನಗರದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆಯ ಸಮಾರೋಪ ಕಾರ್ಯಕ್ರಮದಲ್ಲಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಯು.ಟಿ.ಖಾದರ್, ಪಿಜಿಆರ್ ಸಿಂಧ್ಯ ಇನ್ನಿತರರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net