

ಹುಬ್ಬಳ್ಳಿ: ವಿಶ್ವ ಮಹಿಳಾ ದಿನಾಚರಣೆ ನಿಮಿತ್ತ ಅವ್ವ ಸೇವಾ ಟ್ರಸ್ಟ್, ಧಾರವಾಡ ಜಿಲ್ಲಾ ಪ್ರೌಢಶಾಲಾ ಶಿಕ್ಷಕಿಯರ ಸಂಘ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಪ್ರೌಢ ಶಾಲಾ ಶಿಕ್ಷಕಿಯರಿಗಾಗಿ ಕಾನೂನು ಮತ್ತು ಆರೋಗ್ಯ ಸಲಹೆ ಕುರಿತ ಕಾರ್ಯಾಗಾರವನ್ನು ಏರ್ಪಡಿಸಲಾಗಿತ್ತು.
ಧಾರವಾಡ ಹೈಕೋರ್ಟ್ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ವಿದ್ಯಾವತಿ ಕೊಟ್ಟೂರಶೆಟ್ಟರ್ ಉದ್ಘಾಟಿಸಿ ಮಾತನಾಡಿ, ಮಹಿಳೆಯರಿಗಾಗಿ ಇರುವ ಕಾನೂನುಗಳನ್ನು ಬಲಗೊಳಿಸಿ, ಜಾಗೃತಿ ಮೂಡಿಸಬೇಕು. ಅವರಿಗಾಗಿ ವಿಶೇಷ ಕಾನೂನು ರಚಿಸಬೇಕು ಎಂದರು. ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಕ್ಕಳ ಭವಿಷ್ಯ ಮಹಿಳೆಯರ ಕೈಯಲ್ಲಿದೆ. ಮಹಿಳೆಯರು ಮಕ್ಕಳಿಗೆ ದಾರಿದೀಪವಾಗಬೇಕು. ಉತ್ತಮ ಸಮಾಜ ನಿರ್ವಿುಸುವಲ್ಲಿ ಮಹಿಳೆಯ ಪಾತ್ರ ದೊಡ್ಡದಿದೆ ಎಂದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ ಮಾತನಾಡಿ, ಶಿಕ್ಷಕಿಯರು ಮಾತೃಹೃದಯಿ ಆಗಿರುವುದರಿಂದ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಮತ್ತು ಪಾಲನೆ-ಪೋಷಣೆಗೆ ಸಹಕಾರಿಯಾಗದೆ ಎಂದರು.
ಪದ್ಮಶ್ರೀ ಇಬ್ರಾಹಿಂ ಸುತಾರ ಮಾತನಾಡಿ, ಭಾವೈಕ್ಯದ ಅರಿವನ್ನು ಮೂಡಿಸಿ ಮಹಿಳೆಯರು ಸಬಲರಾಗಿ ಸಮಾಜದ ಯಶಸ್ವಿಗೆ ಕಾರಣೀಕರ್ತರಾಗಬೇಕು ಎಂದರು.
ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೇಷನ್ ಧಾರವಾಡ ಶಾಖೆಯ ಸುಜಾತ ಆನಿಶೆಟ್ಟರ್ ಮಾತನಾಡಿದರು. ಮಹಿಳಾ ಸಂಘದ ಅಧ್ಯಕ್ಷೆ ವನಮಾಲಾ ಹೆಗಡೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ವೇಳೆ ಹಲವಾರು ಶಿಕ್ಷಕಿಯರನ್ನು ಗೌರವಿಸಲಾಯಿತು.
ಅವ್ವ ಸೇವಾ ಟ್ರಸ್ಟ್ ಕಾರ್ಯದರ್ಶಿ ಶಶಿ, ಡಿಡಿಪಿಐ ಎಂ.ಎಲ್. ಹಂಚಾಟೆ, ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರಿಕಟ್ಟಿ, ವಿದ್ಯಾ ನಾಡಿಗೇರ, ಉಮಾದೇವಿ ಬಸಾಪೂರ, ಜಿ.ಆರ್. ಭಟ್ಟ, ಶ್ಯಾಮ್ ಮಲ್ಲನಗೌಡರ್, ಎಫ್.ವಿ. ಮಂಜಣ್ಣನವರ, ಜಿ.ಬಿ. ಬಸಟ್ಟಿ, ಎನ್.ಎಸ್. ಸವಣೂರ, ವಿ.ಎಸ್. ಹುದ್ದಾರ, ಬಿ.ಕೆ. ಮಳಗಿ, ಸಂತೋಷ ಪಾಟೀಲ, ಎಸ್.ವಿ. ಪಟ್ಟಣಶೆಟ್ಟಿ, ಪರತ್ ಜಲಗೇರಿ ವಂದಿಸಿದರು. ಜಿ.ಬಿ. ಗಲಬಿ, ಪ್ರತಿಭಾ ಹೂಗಾರ, ಸುಧಾ, ಸುಜಾತಾ ಚವ್ಹಾಣ ಹಾಜರಿದ್ದರು. ವೀಣಾ ಹುಬ್ಬಳ್ಳಿ ಸ್ವಾಗತಿಸಿದರು. ಜ್ಯೋತಿ ಪಾಟೀಲ ಅತಿಥಿಗಳನ್ನು ಪರಿಚಯಿಸಿದರು. ಕೆ. ರಜನಿ, ಗೀತಾ ಕುಲಕರ್ಣಿ ನಿರೂಪಿಸಿದರು.