ಮಹಿಳೆಯರಿಗೆ ಮೀಸಲು ನೀಡಲು ಮೋದಿಯಿಂದ ಮಾತ್ರ ಸಾಧ್ಯ

17 KRN-1
Published on

ಕೆ.ಆರ್.ನಗರ: ವಿಧಾನಸಭೆ ಮತ್ತು ಸಂಸತ್‌ನಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ನೀಡಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದಿಂದ ಮಾತ್ರ ಸಾಧ್ಯ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷೆ ಮಂಗಳಾ ಸೋಮಶೇಖರ್ ಹೇಳಿದರು.

ಪಟ್ಟಣದ ಎಚ್.ಡಿ.ದೇವೆಗೌಡ ಸಮುದಾಯ ಭವನದಲ್ಲಿ ಶುಕ್ರವಾರ ಆಯೋಜಿಸಿದ್ದ ಬಿಜೆಪಿ ಮೈಸೂರು ಜಿಲ್ಲಾ ಮಹಿಳಾ ಮೋರ್ಚಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ರಾಜಕೀಯವಾಗಿ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಇದ್ದು, ಅದು ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರದಿಂದ ವಿಧಾನಸಭೆ ಮತ್ತು ಸಂಸತ್ತಿಗೂ ಸಿಗಲಿದೆ ಎಂದು ಭರವಸೆ ನೀಡಿದರು.

ಇಂದು ನಾರಿ ಬದಲಾಗಿದ್ದಾಳೆ. ಸ್ವಂತಿಕೆ, ಯೋಚನೆ ಮಾಡುವ ಶಕ್ತಿ, ಯಾರಿಗೆ? ಏಕೆ? ಯಾವ ಸಂದರ್ಭದಲ್ಲಿ ಮತ ನೀಡಬೇಕು? ಎಂಬುದು ಗೊತ್ತಿದೆ. ಸಮಾಜದಲ್ಲಿ ಮಹಿಳೆಯರಿಗೆ ಮಾನ್ಯತೆ ಸಿಕ್ಕಿದೆ. ಇದಕ್ಕೆ ಕಾರಣ ಬಿ.ಎಸ್.ಯಡಿಯೂರಪ್ಪ ಅವರು. ಅವರ ಅಧಿಕಾರವಧಿಯಲ್ಲಿ ಭಾಗ್ಯಲಕ್ಷ್ಮೀ ಯೋಜನೆ, ಹೆಣ್ಣುಮ್ಕಕಳ ಶಿಕ್ಷಣಕ್ಕೆ ಆದ್ಯತೆ ಸೇರಿದಂತೆ ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಮಹಿಳಾ ಸಮಾನತೆ, ಭ್ರಷ್ಟಾಚಾರ ಮುಕ್ತ ಆಡಳಿತ, ಬಡತನ ನಿರ್ಮೂಲನೆ, ರಾಜ್ಯ ಮತ್ತು ದೇಶದ ಸಮಗ್ರ ಅಭಿವೃದ್ಧಿಗಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವನ್ನು ಬೆಂಬಲಿಸಿ ಎಂದು ಮನವಿ ಮಾಡಿದರು.

ರಾಜ್ಯ ಬಿಜೆಪಿ ಶಿಸ್ತು ಸಮಿತಿ ಸದಸ್ಯೆ ರೀನಾ ಪ್ರಕಾಶ್ ಮಾತನಾಡಿ, 2014ರ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರು ಘೋಷಣೆ ಮಾಡಿದಂತೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಕಾರ್ಯಕರ್ತರು ತಲೆ ಎತ್ತಿ ಮತ ಕೇಳಬೇಕು. ಅಂಥ ಆಡಳಿತ ನೀಡುತ್ತೇನೆ ಎಂದು ನೀಡಿದ ಭರವಸೆಯಂತೆ ಆಡಳಿತ ನಡೆಸಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ರಾಜ್ಯ ವಕ್ತಾರೆ ಅಶ್ವಿನಿ, ರಾಜ್ಯ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸಗೌಡ, ಜಿಲ್ಲಾ ಮಾಧ್ಯಮ ಪ್ರಮುಖ್ ಎಚ್.ಪಿ. ಗೋಪಾಲ್, ಜಿಲ್ಲಾ ಮಹಿಳಾ ಮೋರ್ಚಾಧ್ಯಕ್ಷೆ ಮಂಜುಳಾ ಮಾತನಾಡಿದರು. ಬಿಜೆಪಿ ಜಿಲ್ಲಾ ಮಹಿಳಾ ಮೋರ್ಚಾ ಪ್ರಧಾನ ಕಾರ್ಯದರ್ಶಿ ನಂದಿನಿ, ರಾಜ್ಯ ಪ್ರವಾಸೋದ್ಯಮ ಇಲಾಖೆ ನಿರ್ದೇಶಕಿ ಪ್ರಪುಲ್ಲಾ ಮಲ್ಲಾಡಿ, ಜಿಲ್ಲಾ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ತಾಲೂಕು ಅಧ್ಯಕ್ಷರಾದ ದಾಕ್ಷಾಯಿಣಿ, ಮಂಜು, ಜಿಪಂ ಮಾಜಿ ಸದಸ್ಯೆ ನಳಿನಾಕ್ಷಿ ವೆಂಕಟೇಶ್, ಪುರಸಭಾ ಸದಸ್ಯರಾದ ಕೆ.ಬಿ. ವೀಣಾ, ಜಿ.ಪಿ. ಮಂಜು, ಉಮಾಶಂಕರ್, ಮಾಧ್ಯಮ ಸಂಚಾಲಕ ನಾಗೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net