ಮಹಿಳೆಯರಿಗೆ ಕಾನೂನು ಅರಿವು ಅಗತ್ಯ

hsd kanunu arivu 22 p1
Published on

ಹೊಸದುರ್ಗ: ಮೂಲಭೂತ ಹಕ್ಕುಗಳನ್ನು ಬಳಸಿಕೊಳ್ಳುವ ಪ್ರತಿಯೊಬ್ಬರು, ಅದರಂತೆ ಕರ್ತ್ಯವ್ಯಗಳನ್ನೂ ನಿರ್ವಹಿಸುವ ಜವಾಬ್ದಾರಿ ಹೊಂದಿದ್ದಾರೆ ಎಂದು ಜೆಎಂಎಫ್‌ಸಿ ನ್ಯಾಯಾಧೀಶೆ ಎಚ್.ಪಿ.ಚರಿತ ತಿಳಿಸಿದರು.
ಪಟ್ಟಣದ ಸರ್ಕಾರಿ ಜ್ಯೂನಿಯರ್ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ಮೂಲಭೂತ ಹಕ್ಕು ಹಾಗೂ ಕರ್ತವ್ಯಗಳು, ಪೋಕ್ಸೋ ಕಾಯ್ದೆ ಕುರಿತ ಕಾನೂನು ಅರಿವು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದೇಶದ ಪ್ರಜೆಗಳು ಸಮಾಜದ ಒಳಿತಿಗಾಗಿ ಸಂವಿಧಾನ ಹೇಳಿರುವ ಕರ್ತವ್ಯಗಳನ್ನು ಬದುಕಿನಲ್ಲಿ ರೂಢಿಸಿಕೊಳ್ಳಬೇಕು. ಹೆಣ್ಣುಮಕ್ಕಳ ಹಕ್ಕುಗಳನ್ನು ರಕ್ಷಿಸಲು ಸಂವಿಧಾನ ಹಲವಾರು ಕಾನೂನು ಜಾರಿಗೊಳಿಸಿದೆ. ಅಂತಹ ಕಾನೂನುಗಳ ನೆರವು ಪಡೆಯಲು ಎಲ್ಲರೂ ಕನಿಷ್ಟ ಕಾನೂನಿನ ಅರಿವು ಹೊಂದಿರುವ ಅವಶ್ಯಕತೆ ಇದೆ. ಪ್ರತಿಯೊಬ್ಬರೂ ದಿನನಿತ್ಯದ ಬದುಕಿಗೆ ಅಗತ್ಯ ಕಾನೂನುಗಳ ಕುರಿತು ತಿಳಿದುಕೊಂಡರೆ ಸಮಾಜದಲ್ಲಿ ಅನಗತ್ಯ ತೊಂದರೆಗಳಿಂದ ದೂರವಿರಬಹುದು ಎಂದು ತಿಳಿಸಿದರು.
6 ರಿಂದ 14 ವರ್ಷದ ಮಕ್ಕಳಿಗೆ ಶಿಕ್ಷಣ ಒದಗಿಸುವುದು ಕಾನೂನು ನೀಡಿರುವ ಶಿಕ್ಷಣದ ಹಕ್ಕಾಗಿದೆ. ಹೆಣ್ಣು ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆ ತಪ್ಪಿಸುವ ಉದ್ದೇಶದಿಂದ ಸರ್ಕಾರ 2012ರಲ್ಲಿ ಪ್ರಬಲವಾದ ಪೋಕ್ಸೋ ಕಾಯ್ದೆ ಜಾರಿಗೊಳಿಸಿದೆ. ಹೆಣ್ಣುಮಕ್ಕಳು ತಮ್ಮ ಮೇಲೆ ನಡೆಯುವ ಲೈಂಗಿಕ ದೌರ್ಜನ್ಯದ ವಿರುದ್ಧ ಪೋಕ್ಸೋ ಕಾಯ್ದೆಯಡಿ ರಕ್ಷಣೆ ಪಡೆಯಬಹುದಾಗಿದೆ. ಈ ಕುರಿತು ಶಾಲೆಗಳಲ್ಲಿ ಮಕ್ಕಳಿಗೆ ಹೆಚ್ಚು ತಿಳಿಸುವ ಅಗತ್ಯವಿದೆ ಎಂದರು.
ಎಪಿಪಿ ಪಿ.ರುದ್ರಮುನಿ ಮಾತನಾಡಿ, ಪ್ರತಿಯೊಬ್ಬರೂ ನೆಮ್ಮದಿಯಾಗಿ ಬದುಕುವಂತಹ ವ್ಯವಸ್ಥೆಯನ್ನು ಕಾನೂನುಗಳು ರೂಪಿಸಿವೆ. ಅದರಂತೆ ಕಾನೂನುಗಳ ಕುರಿತು ತಿಳಿಯುವ ಪ್ರಯತ್ನವನ್ನು ಪ್ರತಿಯೊಬ್ಬರು ಮಾಡಬೇಕಿದೆ. ಹೆಣ್ಣು ಮಕ್ಕಳ ಮೇಲಿನ ಶೋಷಣೆ ತಡೆಯಲು ಕಾನೂನಿನಲ್ಲಿರುವ ಅವಕಾಶಗಳನ್ನು ತಿಳಿದುಕೊಳ್ಳಬೇಕು. ಪೋಕ್ಸೋ ಕಾಯ್ದೆ ಕುರಿತು ತಿಳಿದುಕೊಳ್ಳುವ ಜತೆಗೆ ಶೋಷಣೆಯ ವಿರುದ್ಧ ಧ್ವನಿ ಎತ್ತುವ ದೈರ್ಯ ತೊರಬೇಕು ಎಂದರು.
ಕಾರ್ಯಕ್ರಮದಲ್ಲಿ ವಕೀಲರ ಸಂಘದ ಕಾರ್ಯದರ್ಶಿ ಬಸವಲಿಂಗಪ್ಪ, ಪ್ರಾಂಶುಪಾಲ ವಿಶ್ವನಾಥ್, ಲಲಿತ ಹಿರೇಮಠ, ದೇವರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net